ಮಂಗಳೂರು: ದಕ್ಷಿಣ ಕನ್ನ ಜಿಲ್ಲೆಯ ನೂತನ ಎಸ್ಪಿಯಾಗಿ ಡಾ. ಅರುಣ್. ಕೆ(ಐಪಿಎಸ್) ಹಿಂದಿನ ಎಸ್ಪಿಯಾಗಿದ್ದ ಯತೀಶ್ ಎನ್. ಅವರಿಂದ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ನೈತಿಕ ಪೊಲೀಸ್ಗಿರಿ, ಮತೀಯವಾದವನ್ನು ಗಂಭೀರವಾಗಿ ಪರಿಗಣಿಸುವುದು ಹಾಗೂ ರೌಡಿಶೀಟರ್ಗಳ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಸರ್ಕಾರ ಹಾಗೂ ಪ್ರಧಾನ ಕಚೇರಿಯ ಆದೇಶದಂತೆ ಈ ದಿನ ದಿನಾಂಕ 30-05-2025 ರಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿರುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಜೊತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ(Moral Policing) ಪ್ರಕರಣಗಳ ಬಗ್ಗೆಯೂ ಗಂಭೀರವಾಗಿ ಪರಿಗಣಿಸಲಾಗುವುದು. ಅದೇ ರೀತಿ ರೌಡಿ ಶೀಟರ್ ಗಳ ಚನವಲನಗಳ ಮೇಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಮೇಲೆ ನಿಗಾ ಇರಿಸಲಾಗುವುದು. ಅಕ್ರಮ ಗಣಿಗಾರಿಕೆ, ಗ್ಯಾಂಬ್ಲಿಂಗ್, ಬೆಟ್ಟಿಂಗ್ ಹಾಗೂ ಇನ್ನಿತರ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರಲ್ಲಿ ಯಾವುದೇ ಮಾಹಿತಿಗಳಿದ್ದಲ್ಲಿ ನೇರವಾಗಿ ಮುಕ್ತವಾಗಿ ನನ್ನ ಮೊಬೈಲ್ ಸಂಖ್ಯೆ: 9480805301 ಅಥವಾ ಕಛೇರಿಗೆ ಸಂಖ್ಯೆ: 0824-2220503ಗೆ ಮಾಹಿತಿ ನೀಡಬಹುದು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.