ಮಂಗಳೂರು: ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಮ್ಚೆ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರ ಇದೇ ಮೇ 16ರಂದು ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ಇವರ ನಿರ್ಮಾಣದಲ್ಲಿ ಸಿನೆಮಾ ಮೂಡಿಬಂದಿದ್ದು ಕರಾವಳಿ ಭಾಗದ ಕಲೆ-ಸಂಸ್ಕೃತಿ-ಆಚಾರ-ವಿಚಾರಗಳನ್ನು ಬಹಳ ಸುಂದರವಾಗಿ ಸಿನೆಮಾದಲ್ಲಿ ತೋರಿಸಲಾಗಿದೆ. ಬಹುತೇಕ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿದ್ದು ಕರಾವಳಿಯ ಸೌಂದರ್ಯವನ್ನು ಸಿನೆಮಾದಲ್ಲಿ ಸೆರೆಹಿಡಿಯಲಾಗಿದೆ. ಲೈಟ್ ಹೌಸ್ ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು ಸಂಸಾರ ಸಮೇತ ಕೂತು ನೋಡುವ ಸಿನೆಮಾವಾಗಿದೆ. ಪ್ರಸ್ತುತ ಕನ್ನಡ ಮಾದ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ ಹಾಗೂ ಕರಾವಳಿಯ ಕಲೆ-ಸಂಸ್ಕೃತಿಯನ್ನು ಸಮಾಜಕ್ಕೆ ತೋರಿಸುವ ಕಥೆ ಈ ಚಿತ್ರದಲ್ಲಿದೆ“ ಎಂದರು.
ಸಿನಿಮಾದ ನಟಿ ಶೈಲಶ್ರೀ ಮೂಲ್ಕಿ ಮಾತಾಡಿ, “ನಾನು ಖುಷಿಪಟ್ಟು ಒಪ್ಪಿಕೊಂಡಿರುವ ಸಿನಿಮಾ ಇದು. ನನಗೆ ಇಷ್ಟದ ಟೀಚರ್ ಪಾತ್ರ ಇದರಲ್ಲಿ ಸಿಕ್ಕಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ಪ್ರತಿಭೆಗೂ ಅವಕಾಶ ನೀಡಲಾಗಿದೆ. ಲೈಟ್ ಹೌಸ್ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಉಡುಪಿಯನ್ನು ಸಿನಿಮಾದ ಹಾಡಿನಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ತುಂಬಾ ಒಳ್ಳೆಯ ಸಂದೇಶ ಸಿನಿಮಾದಲ್ಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.
ಯತೀಶ್ ಪೂಜಾರಿ ಮಾತಾಡಿ, “ಮೇ 16ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ” ಎಂದರು.
ನಿರ್ಮಾಪಕ ದತ್ತಾತ್ರೆಯ ಪಾಟ್ಕರ್ ಮಾತಾಡಿ “ಕರಾವಳಿಯ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಪ್ರೀಮಿಯರ್ ಶೋ ನಡೆಸಲಾಗಿದ್ದು ವೀಕ್ಷಿಸಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ನೇತ್ರದಾನದ ಅದ್ಭುತ ಸಂದೇಶ ಇದೆ. ಕುಟುಂಬ ಮತ್ತು ಮಕ್ಕಳು ಒಟ್ಟಿಗೆ ಕೂತು ನೋಡಬಹುದಾದ ಸಿನಿಮಾ. ಎಲ್ಲರೂ ಸಿನಿಮಾ ನೋಡಿ” ಎಂದರು.
ಸಿನಿಮಾದಲ್ಲಿ ಹೆಸರಾಂತ ಕಲಾವಿದರಾದ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಇವರ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ವಾಸುಕೀ ವೈಭವ್, ಪೃಥ್ವಿ ಭಟ್, ದಿಯಾ ಹೆಗ್ಡೆ ಚಿತ್ರದ ಹಾಡುಗಳಿಗೆ ಧ್ವನಿ ನೀಡಿರುತ್ತಾರೆ.
ಚಿತ್ರದ ಛಾಯಗ್ರಹಣ ಹಾಗೂ ಸಂಕಲನದ ಜವಬ್ದಾರಿಯನ್ನು ಪ್ರಜ್ವಲ್ ಸುವರ್ಣ ವಹಿಸಿಕೊಂಡಿದ್ದು, ಚಿತ್ರಕ್ಕೆ ಸಂಗೀತವನ್ನು ಕಾರ್ತಿಕ್ ಮುಲ್ಕಿ ನೀಡಿರುತ್ತಾರೆ. ಉಡುಪಿ ನಮ್ಮ ಊರು ಹಾಡಿಗೆ ಗಿರಿಧರ್ ದಿವಾನ್ ಸಂಗೀತವನ್ನು ನೀಡಿರುತ್ತಾರೆ.
ಪತ್ರಿಕಾಗೋಷ್ಟಿಯಲ್ಲಿ ಪುಂಡಲೀಕ ಮರಾಟೆ ಮತ್ತಿತರರು ಉಪಸ್ಥಿತರಿದ್ದರು.