ಮುಂಬೈ: 10 ಕೋಟಿ ರೂಪಾಯಿ ನೀಡದಿದ್ದರೆ ನಿನ್ನನ್ನು ನಿನ್ನ ತಂದೆಯಂತೆಯೇ ಮುಗಿಸಿಬಿಡಲಾಗುವುದು ಎಂದು ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕ್ ಗೆ ಸೋಮವಾರ ಇಮೇಲ್ ಮೂಲಕ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ.
ನೀನು ಜೀವಂತವಾಗಿರಬೇಕು ಎಂದಿದ್ದರೆ 10 ಕೋಟಿ ಪಾವತಿಸು, ಇಲ್ಲವಾದಲ್ಲಿ ನಿನ್ನ ತಂದೆಯಂತೆ ನಿನ್ನನ್ನೂ ಮುಗಿಸಲಾಗುವುದು ಎಂಬ ಬೆದರಿಕೆ ಇಮೇಲ್ ಮೂಲಕ ಬಂದಿದ್ದು ಈ ಸಂದೇಶ ‘ಡಿ-ಕಂಪನಿ’ ಸದಸ್ಯರಿಂದ ಬಂದಿದ್ದಾಗಿ ಹೇಳಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಜೀಶನ್ “ಕಳೆದ ಮೂರು ದಿನಗಳಿಂದ ಇಮೇಲ್ ಮೂಲಕ ನನಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿವೆ, ಬೆದರಿಕೆಯಲ್ಲಿ 10 ಕೋಟಿ ರೂಪಾಯಿ ನೀಡದಿದ್ದರೆ ತಂದೆಯಂತೆ ನಿನ್ನನ್ನು ಕೊಲ್ಲಲಾಗುತ್ತದೆ” ಜೊತೆಗೆ ಈ ವಿಚಾರವಾಗಿ ಪೊಲೀಸರನ್ನು ಸಂಪರ್ಕಿಸದಂತೆ ನನಗೆ ಎಚ್ಚರಿಕೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಸದ್ಯ ಜೀಶನ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕಳೆದ ಅಕ್ಟೋಬರ್ 12, 2024 ರಂದು ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಇದಾದ ಬಳಿಕ ಕಳೆದ ಆರು ತಿಂಗಳಿನಿಂದ, ಜೀಶನ್ ಸಿದ್ದಿಕ್‌ಗೆ ಹಲವಾರು ಬಾರಿ ಕೊಲೆ ಬೆದರಿಕೆಗಳು ಬಂದಿದ್ದು. ಈ ಬೆದರಿಕೆಗಳ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಇದೆ ಎಂದು ಹೇಳಲಾಗಿದೆ.