ಮುಸ್ಲಿಂ ಮಹಿಳೆಯರು ಪರ ಪುರುಷರಿಂದ ಮೆಹಂದಿ ಹಚ್ಚಿಸಿಕೊಳ್ಳುವುದು ಹರಾಮ್ ಎಂದ ಮೌಲಾನ

ದೇವಬಂದ್: ಮುಸ್ಲಿಂ ಮಹಿಳೆಯರು ಮಹ್ರಮ್ ಅಲ್ಲದ ಪುರುಷರಿಂದ ಮೆಹಂದಿ ಹಚ್ಚಿಸಿಕೊಳ್ಳುವುದು ಶರಿಯಾ ವಿರುದ್ಧ ಎಂದು ಹಿರಿಯ ದೇವಬಂದಿ ಧರ್ಮಗುರು ಮತ್ತು ಜಮಿಯತ್ ದವಾತುಲ್ ಮುಸ್ಲಿಮೀನ್‌ನ ಪೋಷಕರಾದ ಮೌಲಾನಾ ಖಾರಿ ಇಶಾಕ್ ಗೋರಾ ಅವರು ಎಚ್ಚರಿಕೆ ನೀಡಿದ್ದು, ಇದರ ವೀಡಿಯೊ ವೈರಲ್ ಆಗಿದೆ.

ʻಮುಸ್ಲಿಂ ಮಹಿಳೆಯರು ಮಾರುಕಟ್ಟೆಗೆ ಹೋಗಿ ಅಪರಿಚಿತ ಪುರುಷರಿಂದ ಮೆಹಂದಿ ಅಥವಾ ಬಳೆಗಳನ್ನು ಧರಿಸಿಕೊಳ್ಳುವುದು ಶರಿಯತ್‌ನಲ್ಲಿ ಸಂಪೂರ್ಣವಾಗಿ ತಪ್ಪು. ಇದು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ದಾರುಲ್ ಉಲೂಮ್ ದೇವಬಂದ್‌ನ ಫತ್ವಾವನ್ನು ಉಲ್ಲೇಖಿಸಿದ ಅವರು, ಮಹ್ರಮ್ ಅಲ್ಲದ ಪುರುಷರಿಂದ ಮೆಹಂದಿ ಹಚ್ಚಿಸಿಕೊಳ್ಳುವುದು ನಿಷಿದ್ಧ (ಹರಾಮ್) ಎಂದು ಫತ್ವಾ ಸ್ಪಷ್ಟವಾಗಿ ತಿಳಿಸುತ್ತದೆ ಎಂದಿದ್ದಾರೆ.

ಈ ಪ್ರವೃತ್ತಿಯು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಮತ್ತು ಸಂಪ್ರದಾಯದ ಹೆಸರಿನಲ್ಲಿ ಹೆಚ್ಚುತ್ತಿರುವುದನ್ನು ಗಮನಿಸಿರುವ ಮೌಲಾನಾ, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ʻಸಮಾಜದ ಎಲ್ಲಾ ಜನರು, ವಿಶೇಷವಾಗಿ ಮಹಿಳೆಯರು, ಇಸ್ಲಾಮಿಕ್ ಬೋಧನೆಗಳು ಮತ್ತು ಫತ್ವಾಗಳನ್ನು ಗೌರವಿಸಬೇಕು ಮತ್ತು ಶರಿಯಾದ ಸೂಚನೆಗಳನ್ನು ತಮ್ಮ ಜೀವನದಲ್ಲಿ ಜಾರಿಗೆ ತರಬೇಕು ಶರಿಯತ್ ವಿರುದ್ಧವಾಗಿ ಹೋಗುವುದು ಧಾರ್ಮಿಕತೆಯಲ್ಲ, ಅದು ನಿರ್ಲಕ್ಷ್ಯತನವಾಗಿದೆ’ ಎಂದು ಅವರು ತಿಳಿಸಿದ್ದಾರೆ. ಮದುವೆಯಂತಹ ಸಂದರ್ಭಗಳಲ್ಲಿ ಸಹ ಶರಿಯಾವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಇಸ್ಲಾಮಿಕ್ ಸಂಸ್ಕೃತಿಯನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಾರುಲ್ ಉಲೂಮ್ ದೇವಬಂದ್, ಭಾರತದ ಪ್ರಮುಖ ಇಸ್ಲಾಮಿಕ್ ಶೈಕ್ಷಣಿಕ ಕೇಂದ್ರವಾಗಿದ್ದು, ಇದರ ಫತ್ವಾಗಳನ್ನು ದೇಶ-ವಿದೇಶಗಳಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಮೌಲಾನಾ ಗೋರಾ ಅವರ ಈ ಹೇಳಿಕೆಯು ಮುಸ್ಲಿಂ ಸಮಾಜದಲ್ಲಿ ಶರಿಯಾ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ʻನಮ್ಮ ಧರ್ಮವನ್ನು ಆಳವಾಗಿ ಅರ್ಥಮಾಡಿಕೊಂಡು, ಇಸ್ಲಾಮಿಕ್ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ’ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ. ಸದ್ಯ ಈ ಹೇಳಿಕೆಯು ಮದುವೆ ಸೀಸನ್‌ನಲ್ಲಿ ಧಾರ್ಮಿಕ ಆಚರಣೆಗಳ ಕುರಿತು ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

error: Content is protected !!