ಗಣೇಶಪುರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
ಸುರತ್ಕಲ್: ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಹಿನ್ನೆಲೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಆದಿತ್ಯವಾರ ಸಂಜೆ ನಡೆಯಿತು.
ಉಡುಪಿ ಶ್ರೀ ಕೃಷ್ಣಾಪುರ ಮಠದ ಪರಮ ಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವಚನದ ನುಡಿಗಳನ್ನಾಡಿದ ಅವರು, “ಗಣೇಶಪುರ ಕ್ಷೇತ್ರದಲ್ಲಿ ದೀರ್ಘ ಸಮಯದ ಬಳಿಕ ಬ್ರಹ್ಮಕಲಶೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ದೇವಳದಲ್ಲಿ ನಡೆಯಬೇಕಾದ ಎಲ್ಲ ಕಾರ್ಯಗಳು ಮಹಾಗಣಪತಿಯ ಆಶೀರ್ವಾದದಿಂದ ಸುಸೂತ್ರದಿಂದ ನಡೆದಿದೆ. ದೇವರಲ್ಲಿ ವಿಶೇಷವಾದ ಭಕ್ತಿ ಹೊಂದಿರುವ ಸಜ್ಜನರ ಕಷ್ಟಗಳನ್ನು ವಿಘ್ನ ನಿವಾರಕನಾದ ಗಣೇಶನು ಪರಿಹರಿಸುತ್ತಾನೆ. ಭಕ್ತರ ಇಷ್ಟಾರ್ಥವನ್ನು ಗಣಪತಿಯು ಪರಿಹರಿಸಲಿ ಎಲ್ಲರಿಗೂ ಒಳಿತಾಗಲಿ“ ಎಂದರು.
ವೇದಿಕೆಯಲ್ಲಿ ಎಂ.ಆರ್.ಪಿ.ಎಲ್. ನಿರ್ದೇಶಕ ನಂದಕುಮಾರ್, ಡಾ.ವಿದ್ಯಾಪ್ರಭಾ, ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಧಾರ್ಮಿಕ ವಿದ್ವಾಂಸ ವೇ.ಮೂ.ಶ್ರೀ ವಾದಿರಾಜ ಉಪಾಧ್ಯಾಯ ಕೊಲೆಕಾಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಬಿಎಎಸ್ಸೆಫ್ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್ ಪೈ, ಲಯನ್ ವೆಂಕಟೇಶ್ ಹೆಬ್ಬಾರ್, ನಿಕಟಪೂರ್ವ ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್, ದೇವಳದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾಶಿವ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅತಿಥಿಗಳನ್ನು ಸ್ವಾಗತಿಸಿದರು. ಸುಧಾಕರ್ ಕಾಮತ್ ಮತ್ತು ಅಶೋಕ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಯಾನಂದ ಧನ್ಯವಾದ ಸಮರ್ಪಿಸಿದರು.