ಮೂಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿದ್ದ ರಥೋತ್ಸವ ಸಂದರ್ಭ ದೇವರ ತೇರು ಮುರಿದು ಬಿದ್ದಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ. ನಸುಕಿನ 1.40 ರಿಂದ 2 ಗಂಟೆ ವೇಳೆ ಬ್ರಹ್ಮರಥೋತ್ಸವ ತೇರಿನ ಮೇಲ್ಬಾಗ ಕುಸಿದು ಬಿದ್ದಿದ್ದು ಇದರಿಂದ 9 ಮಾಗಣೆಯ ದೇವಿಯ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ.
ಘಟನೆ ನಡೆಯುವ ಸಂದರ್ಭದಲ್ಲಿ ಅರ್ಚಕರು ರಥದಲ್ಲಿಯೇ ಕುಳಿತಿದ್ದರು. ಕೆಳಗಡೆ ಸಾವಿರಾರು ಮಂದಿ ಭಕ್ತಾಧಿಗಳು ರಥ ಎಳೆಯುವುದರಲ್ಲಿ ತಲ್ಲೀನರಾಗಿದ್ದರು. ಏಕಾಏಕಿ ರಥವನ್ನು ನಿಗ್ರಹಿಸುವ ದಂಡ ತುಂಡಾದ ಪರಿಣಾಮ ರಥದ ಮೇಲ್ಬಾಗ ಸಂಪೂರ್ಣ ಧರೆಗೆ ಉರುಳಿದೆ. ಓರ್ವ ಅರ್ಚಕರಿಗೆ ತರಚಿದ ಗಾಯವಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ನಂತರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ಮುಂದುವರಿಸಲಾಯಿತು.
ಕಳೆದ ಬಾರಿ ರಥೋತ್ಸವ ಸಂದರ್ಭದಲ್ಲಿ ರಥ ಸಾಗುವ ಮಾರ್ಗದಲ್ಲಿ ಬೈಕ್ ಸ್ಕೂಟರ್ ಕಾರ್ ನಿಲ್ಲಿಸಿದ್ದರೆಂದು ಕಿಡಿಗೇಡಿಗಳು ಭಕ್ತರ ವಾಹನಗಳನ್ನು ಎತ್ತಿ ಎಸೆದು ಹಾನಿಯುಂಟು ಮಾಡಿದ್ದ ಘಟನೆ ನಡೆದಿತ್ತು. ಈ ವೇಳೆ ಸ್ಥಳದಲ್ಲಿದ್ದ ಭಕ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಕಿಡಿಗೇಡಿಗಳ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿ ರಥೋತ್ಸವ ಸಂದರ್ಭದಲ್ಲಿ ರಥವೇ ತುಂಡಾಗಿ ಬಿದ್ದಿರುವುದು ಅನಿಷ್ಟದ ಸೂಚನೆ ಎಂದು ಭಕ್ತರು ಚರ್ಚಿಸುತ್ತಿದ್ದಾರೆ.
