ಬಂಟ್ವಾಳ : ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೋರ್ವ ಏ.5ರಂದು ಮೃತಪಟ್ಟಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸಹಕಾರದಿಂದ ಮೃತದೇಹವನ್ನು ಹುಟ್ಟೂರಿಗೆ ತಂದು, ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ನರಿಕೊಂಬು ಗ್ರಾಮ ನಿವಾಸಿ ರವಿ ಸಪಲ್ಯ ಅವರ ಪುತ್ರ ರಜತ್ (25) ಮೃತಪಟ್ಟ ದುರ್ದೈವಿ.
ರಜತ್ ಕಳೆದ ಕೆಲ ಸಮಯಗಳಿಂದ ರಜತ್ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಎ.5ರಂದು ಅಕಾಲಿಕವಾಗಿ ಮೃತಪಟ್ಟಿದ್ದರು. ಮೃತದೇಹವನ್ನು ತರಲು ಕಠಿಣ ವಿದೇಶಾಂಗ ನಿಯಮಗಳಿರುವ ಕಾರಣ ಮನೆಮಂದಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಮೊರೆ ಹೋಗಿದ್ದರು. ಸಂಸದ ಹಾಗೂ ಶಾಸಕ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ಮೃತದೇಹವನ್ನು ಊರಿಗೆ ತರಲು ಸಹಕರಿಸಿದ್ದಾರೆ.