ಬೆಂಗಳೂರು/ತಮಿಳುನಾಡು: ಒಂದು ವೇಳೆ ಬಿಜೆಪಿ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳಲೇಬೇಕಾದರೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನು ಕೆಳಗಿಳಿಸಬೇಕೆಂದು ಎಐಡಿಎಂಕೆ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದು, ಸದ್ಯದಲ್ಲೇ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಗಟ್ಟಿಗೊಳಿಸಬೇಕೆಂದು ನಿರ್ಧರಿಸಿದ್ದ ಅಣ್ಣಾಮಲೈ ಒಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದಕ್ಕೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಎಐಡಿಎಂಕೆ ಸ್ಥಳೀಯ ನಾಯಕರಿಗೂ ಅಣ್ಣಾ ಮಲೈಗೂ ಆಗಿಬರುವುದಿಲ್ಲ. ಅಣ್ಣಾ ಮಲೈ ಅವರು ಎಐಡಿಎಂಕೆ ಐಕಾನ್‌ಗಳಾದ ಅಣ್ಣಾದೊರೈ, ರಾಮಚಂದ್ರನ್ ಮತ್ತು ದಿ. ಜಯಲಲಿತಾ ಅವರನ್ನು ಗುರಿಯಾಗಿಸಿ ಟೀಕಿಸುತ್ತಿದ್ದರು. ಇದರಿಂದ ಕೋಪಗೊಂಡಿದ್ದ ಎಐಡಿಎಂಕೆ ಎನ್‌ಡಿಎ ಕೂಟದಿಂದ ಹೊರಬಂದಿತ್ತು. ಆದರೆ ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಕಾಡಿಕೊಂಡು ತನ್ನ ಬೇರು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಅಣ್ಣಾಮಲೈ ಜೊತೆ ವಿರಸ ಹೊಂದಿರುವ ತಮಿಳುನಾಡು ಎಐಡಿಎಂಕೆ ನಾಯಕರು ಅಣ್ಣಾಮಲೈ ಬಿಜೆಪಿ ಅಧ್ಯಕ್ಷಾಗಿರುವ ತನಕ ಎನ್‌ಡಿಎ ಜೊತೆ ಮೈತ್ರಿ ಇಲ್ಲ ಎಂದು ಕಡ್ಡಿಮುರಿದಂತೆ ನುಡಿದಿರುವ ಕಾರಣ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಅಲ್ಲದೆ ಕೇಂದ್ರದಲ್ಲಿ ಒಂದು ಮಹತ್ವದ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಣ್ಣಾಮಲೈ ಎಐಡಿಎಂಕೆ ಜೊತೆ ವಿರಸ ಕಟ್ಟಿಕೊಂಡು ಭಾರೀ ಬೆಲೆ ತೆರೆದಿದ್ದರು. ಸ್ವತಃ ಬಿಜೆಪಿ ಅಧ್ಯಕ್ಷನಾಗಿದ್ದ ಅಣ್ಣಾ ಮಲೈ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಹೀಣಾಯವಾಗಿ ಸೋತಿದ್ದರು. ಆದರೆ ಈ ಬಾರಿ ಬಿಜೆಪಿ ಎಐಡಿಎಂಕೆ ಜೊತೆ ಮೈತ್ರಿಗೆ ಮುಂದಾಗಿರುವುದು ಅಣ್ಣಾಮಲೈ ಅವರನ್ನು ಬಲಿಪಶು ಮಾಡುವಂತೆ ಮಾಡಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ತಡೆಯಲು ಹಾಗೂ ಬಿಜೆಪಿ ತನ್ನ ಸ್ಥಾನವನ್ನು ಬೇರೂರಲು ಸ್ಥಳೀಯ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಹೀಗಾದಲ್ಲಿ ಮಾತ್ರ ಡಿಎಂಕೆಯನ್ನು ಕಟ್ಟಿ ಹಾಕಬಹುದು. ಜೊತೆಗೆ, ಸ್ಥಳೀಯವಾಗಿ ಡಿಎಂಕೆ ಪಕ್ಷಕ್ಕೆ ವಿರೋಧ ಪಕ್ಷವಾಗಿರುವ ಎಐಡಿಎಂಕೆಗೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆಯೂ ಇದೆ. ಆದರ ಜೊತೆಗೆ, ಇತ್ತೀಚೆಗೆ ರಾಜಕೀಯಕ್ಕೆ ಧುಮುಕಿರುವ ತಳಪತಿ ವಿಜಯ್ ಕೂಡ ಕೆಲವು ಮತಗಳನ್ನು ಆಕರ್ಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ದ್ರಾವಿಡ ವಿರೋಧ ನಡೆಯಿರುವ ಕೆಲವು ಮತಗಳು ಎಐಡಿಎಂಕೆ ಹಾಗೂ ಡಿಎಂಕೆ ಪಕ್ಷವನ್ನು ಬಿಟ್ಟು ದಳಪತು ವಿಜಯ್ ಅವರಿಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ, ಇಂತಹ ಮತಗಳನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಸುಲಭವಾಗಿ ತಮ್ಮತ್ತ ಸೆಳೆಯಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.
ಹಿಂದಿ ವಿರೋಧಿ, ಮೋದಿ ವಿರೋಧಿ ಹಾಗೂ ತ್ರಿಭಾಷಾ ಸೂತ್ರದ ವಿರೋಧಿ ನಡೆಗಳು ಹೆಚ್ಚಾಗಿವೆ. ಇದೆಲ್ಲವನ್ನೂ ಅಳೆದು ತೂಗಿ ಎಐಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. ಆದ್ದರಿಂದ ಇಲ್ಲಿ ಬಿಜೆಪಿ ಹಾಗೂ ಮೋದಿ ಪರ ಅಲೆಯನ್ನು ಎಬ್ಬಿಸುತ್ತಿರುವ ಅಣ್ಣಾ ಮಲೈ ಅವರನ್ನು ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಎಐಡಿಎಂಕೆ ಪಟ್ಟು ಹಿಡಿದಿದೆ. ಒಟ್ಟಾರೆಯಾಗಿ, ಎಐಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡುವುದಕ್ಕೆ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದ ಅಣ್ಣಾ ಮಲೈ ಅವರನ್ನು ಬಲಿಪಶು ಮಾಡುವ ಸಾಧ್ಯತೆ ನಿಚ್ಚಳವಾಗಿದೆ.