ಮಂಗಳೂರು: ರಮಾಬಾಯಿ ಚಾರಿಟೇಬಲ್ ಫೌಂಡೇಶನ್ ಮೈಸೂರು ಇದರ ಆಶ್ರಯದಲ್ಲಿ “ಎರಡು ನೆರೆಗಳ ನಡುವೆ” ಮಂಗಳೂರು ಗಣೇಶ ಬೀಡಿ ಕಥನ ಪುಸ್ತಕ ಬಿಡುಗಡೆ ಸಮಾರಂಭ ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಜರುಗಿತು.
ಪುಸ್ತಕ ಬಿಡುಗಡೆಯ ಬಳಿಕ ಮಾತಾಡಿದ ಹಿಂದ್ ಮಜ್ದೂರ್ ಸಭಾ ಅಧ್ಯಕ್ಷ ಮಹಮ್ಮದ್ ರಫಿ ಅವರು, “1923 ಮತ್ತು 1974ರ ಎರಡು ನೆರೆಗಳಲ್ಲಿ ಮಂಗಳೂರು ಗಣೇಶ್ ಬೀಡಿ ನೀರಲ್ಲಿ ಕೊಚ್ಚಿಹೋಗಿತ್ತು. ಈ ಇತಿಹಾವನ್ನು ಇಂದಿನ ಪೀಳಿಗೆಯ ಜನರಿಗೆ ತಿಳಿಸುವ ಬಗ್ಗೆ ಪುಸ್ತಕ ರೂಪದಲ್ಲಿ ತರುವ ಬಗ್ಗೆ ಯೋಚನೆ ಮಾಡಿದಾಗ ನಮಗೆ ಸಿಕ್ಕಿದ್ದು ಲೇಖಕ ಮಂಜುನಾಥ್ ಕಾಮತ್ ಅವರು. ಅವರನ್ನು ಸಂಪರ್ಕಿಸಿ ಪುಸ್ತಕ ಬರೆಯಲು ಹೇಳಿದ್ದು ಎಂಟು ತಿಂಗಳಲ್ಲಿ ಈ ಪುಸ್ತಕ ಬಿಡುಗಡೆಗೆ ಸಿದ್ಧವಾಯಿತು. ಇದನ್ನು ಜನರು ಓದಿ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ತಿದ್ದಿ ತೀಡಬೇಕು. ಇಂತಹ ಪುಸ್ತಕ ಹೊರತರಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು“ ಎಂದರು.
ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಮಾತಾಡಿ, ”ನಾವು ಪುಸ್ತಕ ಬಿಡುಗಡೆಯ ಪುಣ್ಯಕಾರ್ಯದಲ್ಲಿ ಭಾಗಿಯಾಗಿದ್ದೇವೆ. ಇದಕ್ಕಾಗಿ ಲೇಖಕರು ಮತ್ತು ಪ್ರೇರಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎರಡು ನೆರೆಗಳ ನಡುವೆ ಒಂದು ರೋಮಾಂಚನಕಾರಿ ಕಲ್ಪನೆ. ಎರಡು ನೆರೆಗಳಲ್ಲಿ ಎಷ್ಟೊಂದು ಬದಲಾವಣೆಯಾಗಿರಬಹುದು, ಜನರ ಉದ್ಯೋಗ, ಆಹಾರ, ಬದುಕು ಹೇಗಿರಬಹುದು ಅನ್ನುವುದಕ್ಕೆ ಈ ಗ್ರಂಥ ಪೂರಕ. ಎಲ್ಲರೂ ಪುಸ್ತಕ ಓದಿ ಮತ್ತು ಇತರರಿಗೂ ಪುಸ್ತಕದ ಬಗ್ಗೆ ಹೇಳಿ“ ಎಂದರು.
ಕೃತಿ ಬಿಡುಗಡೆಗೊಳಿಸಿ ಮಾತಾಡಿದ ಹಾಸನ ಜಿಲ್ಲೆಯ ಉಪಕಾರ್ಮಿಕ ಆಯುಕ್ತರಾದ ಗುರುಪ್ರಸಾದ್ ಹೆಚ್.ಎಲ್. ಅವರು, “ಎರಡು ನೆರೆಯ ಬಳಿಕ ಗಣೇಶ್ ಬೀಡಿ ಉದ್ಯಮ ಯಾವ ರೀತಿ ಬೆಳೆಯಿತು, ರಘುರಾಮ ಕಾಮತ್ ಸ್ಥಾಪಿಸಿದ ಉದ್ಯಮ ಮಹಿಳೆಯರಿಗೆ ಯಾವ ರೀತಿ ನೆರವಾಯಿತು ಅನ್ನುವುದಕ್ಕೆ ಈ ಪುಸ್ತಕದಲ್ಲಿ ಉತ್ತರವಿದೆ. ಈ ಕಾರಣಕ್ಕೆ ಮಹಮ್ಮದ್ ರಫಿ ಹಾಗೂ ಕೃತಿ ರಚನೆಕಾರ ಮಂಜುನಾಥ್ ಕಾಮತ್ ರನ್ನು ಅಭಿನಂದಿಸುತ್ತೇನೆ” ಎಂದರು.
ಅಧ್ಯಕ್ಷತೆಯನ್ನು ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ ಮಾತನಾಡಿ, “ನಾನು ತಂದೆಯವರಿಂದ ಬೀಡಿ ಉದ್ಯಮದ ಬಗ್ಗೆ ಅಲ್ಪಸ್ವಲ್ಪ ಕಲಿತು ವ್ಯವಹಾರ ಮಾಡುತ್ತಿದ್ದೇನೆ. ಕಾರ್ಮಿಕರೇ ನಮಗೆ ಮೊದಲು ಆ ಬಳಿಕ ಮಾಲಕರು. ಹಿಂದಿನಿಂದಲೂ ಇದೇ ಸಿದ್ಧಾಂತದಡಿಯಲ್ಲಿ ಗಣೇಶ್ ಬೀಡಿಯನ್ನು ಮುನ್ನಡೆಸಿದ್ದೇವೆ. ಗಣೇಶ್ ಬೀಡಿ ಕಂಪೆನಿಯ ಇತಿಹಾಸ ತಿಳಿಯಲು ಈ ಪುಸ್ತಕ ಪೂರಕವಾಗಿದೆ. ಈಗ ಬೀಡಿ ಉದ್ಯಮ ಸಂಕಷ್ಟದಲ್ಲಿದ್ದು ಸರಕಾರ ಏನೊಂದು ಸಹಕಾರ ಕೊಡುತ್ತಿಲ್ಲ. ಗುಟ್ಕಾ ಸಿಗರೇಟ್ ಮೆಷಿನ್ ಮೇಡ್ ಆಗಿದ್ದು ಬೀಡಿ ಕಾರ್ಮಿಕರನ್ನು ಅವಲಂಬಿಸಿ ನಡೆಯುತ್ತಿದೆ. ನಮ್ಮನ್ನು ಅವರಿಗೆ ಹೋಲಿಸಬೇಡಿ. ಎಲ್ಲರೂ ಪುಸ್ತಕ ಓದಿ“ ಎಂದರು.
ಲೇಖಕ ಮಂಜುನಾಥ ಕಾಮತ್ ಕೃತಿ ನಿರೂಪಣೆಗೈದು, ”ಈ ಪುಸ್ತಕ ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಬೀಡಿ ಉದ್ಯಮದ ಬಗ್ಗೆ ನನಗೆ ಬರೆಯುತ್ತ ಹೋದಂತೆ ಕುತೂಹಲ ಬೆಳೆಯಿತು. ಅದನ್ನು ಕಥನದ ರೂಪದಲ್ಲಿ ನಿಮ್ಮ ಮುಂದಿಟ್ಟಿದ್ದೇನೆ. ಮುಂದೆ ಕಾಫಿ ಟೇಬಲ್, ಇಂಗ್ಲೀಷ್ ಪುಸ್ತಕದ ರೂಪದಲ್ಲಿ ಬರಲಿದೆ. ಎಲ್ಲರೂ ಪುಸ್ತಕ ಓದಿದಲ್ಲಿ ನಮ್ಮ ಶ್ರಮ ಸಾರ್ಥಕ“ ಎಂದರು.
ವೇದಿಕೆಯಲ್ಲಿ ಬಿ.ವಿ. ಕಾರಂತ ರಂಗ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷ ಜಯರಾಮ್ ಪಾಟೀಲ್, ಸುಬ್ರಾಯ ಪೈ ಮತ್ತಿತರರು ಉಪಸ್ಥಿತರಿದ್ದರು.
ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕೆ.ಎಸ್. ಧನ್ಯವಾದ ಅರ್ಪಿಸಿದರು.