ಮೂಡಬಿದ್ರಿ: ಗೂಡಂಗಡಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮೂಡಬಿದ್ರಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ನಿಡ್ಡೋಡಿ ನೀರುಡೆ ನಿವಾಸಿ ರೋಷನ್ ವಿಲ್ಸನ್ ಕ್ಯಾಡ್ರಸ್(37), ಕೊಂಪದವು ನೆಲ್ಲಿತೀರ್ಥ ಸಾಂತ್ರಬೈಲ್ ನ ನಿಶಾಂಕ್ ಪೂಜಾರಿ(18), ತೆಂಕ ಎಕ್ಕಾರಿನ ನಿರೋಡೆಯ ರೋಹಿತ್ ಮಸ್ಕರೇನಸ್ (21) ಎಂದು ಹೆಸರಿಸಲಾಗಿದೆ.
ಜನವರಿ 9ರಂದು ರಾತ್ರಿ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಪುತ್ತಿಗೆ ಸಮೀಪ ಗೂಡಂಗಡಿಯ ಮೇಲ್ಚಾವಣಿಯ ಶೀಟ್ ತೆಗೆದು, ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಸುಮಾರು ರೂ. 20,000 ನಗದು ಮತ್ತು ಸುಮಾರು ರೂ. 48,000 ಮೌಲ್ಯದ ಸಿಗರೇಟು, ತಿಂಡಿ, ನೀರು ಬಾಟಲ್, ಕೊಲ್ಡ್ ಡ್ರಿಂಕ್ಸ್, ಚಾಕೊಲೇಟ್, ಮಿಕ್ಸರ್, ಬಿಸ್ಕೆಟ್ ಇತ್ಯಾದಿ ವಸ್ತುಗಳನ್ನು ಕಳವುಗೈಯಲಾಗಿತ್ತು.
ಆರೋಪಿಗಳು ಮುಲ್ಕಿ, ಬಜ್ಪೆ, ಕಾರ್ಕಳ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳಿಂದ 25 ಕ್ಕೂ ಹೆಚ್ಚು ಗೂಡಂಗಡಿಗಳ ವಸ್ತುಗಳನ್ನು ಕಳವು ಮಾಡಿರುತ್ತಾರೆ.
ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು ಮತ್ತು ಆ್ಯಕ್ಟಿವ್ ಸ್ಕೂಟರ್ ಮತ್ತು ರೂ. 5000 ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ. 3,55,000 ಆಗಿರುತ್ತದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ಧಾರ್ಥ ಗೊಯಲ್, ರವಿಶಂಕರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದಲ್ಲಿ ನವೀನ್ ಪಿ.ಎಸ್.ಐ, ರಾಜೇಶ್ ಎಎಸ್‌ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಸಾಲ್, ಮೊಹಮ್ಮದ್ ಹುಸೈನ್ ಅಕೀಲ್ ಅಹಮ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್ ಮತ್ತು ರಾಜೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.