~ ಸೈಫ್ ಕುತ್ತಾರ್
ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು ಅಂತ ಹೇಳ್ತಿವಿ. ಅಂತಹ ಮಾನವೀಯತೆಯ ಪ್ರತೀಕ, ಹೃದಯವಂತ ಶಿಕ್ಷಕ ಅದು ಮೊಂಟೆಪದವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಸರ್.
ಮೊನ್ನೆ ಮಂಜನಾಡಿ ಗ್ಯಾಸ್ ದುರಂತದಲ್ಲಿ ಮರಣ ಹೊಂದಿದ ನನ್ನ ಅಣ್ಣನ ಇಬ್ಬರು ಮಕ್ಕಳು, ಮತ್ತು ಚೇತರಿಸಿಕೊಳ್ಳುತ್ತಿರುವ ಒಂದು ಮಗು ಇವರ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದದ್ದು .ಮೂವರೂ 14, 12, 9 ವರ್ಷದ ಹೆಣ್ಣು ಮಕ್ಕಳು.ಇವರು ಗ್ಯಾಸ್ ದುರಂತ ಸಂಭವಿಸಿದ ದಿನದಿಂದ ಹಿಡಿದು 21 ದಿನಗಳವರೆಗೆ ಆಸ್ಪತ್ರೆಯಲ್ಲಿ ನಮ್ಮ ಜತೆಗೆನೆ ರಾತ್ರಿ ಹೊತ್ತಿನ ತನಕ ಇದ್ದು ಮಕ್ಕಳ ಆರೋಗ್ಯ ವಿಚಾರಿಸಿ ಮತ್ತೆ ಮನೆಗೆ ಹೋಗುತ್ತಿದ್ದರು. ಐಸಿಯು ಒಳಗಡೆ ಹೋಗಿ ಮಕ್ಕಳ ಜತೆ ಮಾತನಾಡುತ್ತಾ ಆ ಮಕ್ಕಳಿಗೆ ಧೈರ್ಯ ಕೊಡುತ್ತಿದ್ದರು. ತೀರ ಸುಟ್ಟ ಗಾಯಗಳೊಂದಿಗೆ ನೋವಲ್ಲಿ ಚೀರಾಡುತ್ತಿದ್ದ ಆ ಮೂರು ಮಕ್ಕಳು ತನ್ನ ಅಧ್ಯಾಪಕನನ್ನು ಗುರುತು ಹಿಡಿದು ನಾವಿನ್ನು ಪಾಸಾಗಲ್ಲ, ಹೋಮ್ ವರ್ಕ್ ಬಾಕಿ ಇದೆ, ಫೈಲ್ ಆಗ್ತಿವಿ, ನಮ್ಮ ಭವಿಷ್ಯ ಹೋಯಿತಲ್ಲ ಎಂದಲ್ಲ ಹೇಳಿ ಅಳುತ್ತಿದ್ದಾಗ, ಇಲ್ಲ ನಿಮ್ಮನ್ನ ಪಾಸ್ ಮಾಡ್ತಿದ್ದೀವಿ, ಏನೂ ಟೆನ್ಶನ್ ಮಾಡಬೇಡಿ ಎಂದು ಮಾನಸಿಕವಾಗಿ ಧೈರ್ಯ, ಆತ್ಮ ವಿಶ್ವಾಸ ತುಂಬುತ್ತಿದ್ದರು. ಅವರ ಧೈರ್ಯದ ಮಾತುಗಳಿಂದ ಮಕ್ಕಳು ಒಂದಿಷ್ಟು ದಿನ ಚೇತರಿಸಿಕೊಳ್ಳುವಂತಾಗಿತ್ತು.
ಯಾವಾಗ ಮಕ್ಕಳ ಜತೆ ಮಾತಾಡಿ ಐಸಿಯುನಿಂದ ಹೊರಗಡೆ ಬರುತ್ತಿದ್ದರೋ ತನ್ನ ಕಣ್ಣೀರನ್ನ ಒರೆಸ್ತಾ ಭಾವುಕರಾಗ್ತಾ ಗಟ್ಟಿ ಮನಸ್ಸಿನೊಂದಿಗೆ ನಮ್ಮ ಜೊತೆಗೆ ಬಂದು ನಗುಮುಖದಿಂದ ನಮ್ಮನ್ನ ಸಮಾಧಾನಪಡಿಸ್ತಿದ್ರು. ಪ್ರತಿದಿನಾ ಶಾಲೆಯಲ್ಲಿ ಮಕ್ಕಳನ್ನು ಒಟ್ಟು ಸೇರಿಸಿ ಮಕ್ಕಳು ಆರೋಗ್ಯದಿಂದ ಗುಣಮುಖರಾಗಿ ಬದುಕಿ ಬರಲೆಂದು ನಿರಂತರ ಪ್ರಾರ್ಥನೆ ಮಾಡಿಸುತ್ತಿದ್ದರು. ಪೋಷಕರ ನಂತರ ಮಗುವಿನ ಜೀವನದಲ್ಲಿ ಶಿಕ್ಷಕರನ್ನ ಎರಡನೇ ಪ್ರಮುಖ ವ್ಯಕ್ತಿ ಎಂದು ನಾವು ಪರಿಗಣಿಸ್ತೀವಿ.ಇಲ್ಲಿಯೂ ಆ ಮಕ್ಕಳು ಗುಣಮುಖರಾಗಲೆಂದು ಅವರು ಪಟ್ಟ ಶ್ರಮವನ್ನ ಖಂಡಿತ ಯಾವತ್ತೂ ಮರೆಯಕ್ಕಾಗಲ್ಲ.
ಯಾವಾಗ ಡಾಕ್ಟರ್ ಬಂದು ಮಕ್ಕಳ ಚರ್ಮಕ್ಕೆ, ವೈದ್ಯಕೀಯ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣಬೇಕಾಗಬಹುದು ಎಂದಾಗ, ಕೂಡಲೇ ಕಾರ್ಯ ಪ್ರವತ್ತರಾದ ಸಂತೋಷ್ ಸರ್,
ಅವರು ನನ್ನ ವಿದ್ಯಾರ್ಥಿಗಳು, ನನ್ನಿಂದ ಸಾಧ್ಯವಾಗುವಷ್ಟು ನಾನು ಕೂಡಾ ಏನಾದ್ರು ಮಾಡ್ತೀನಿ ಎಂದು ಹೇಳಿ ಶಾಲಾ ಆಡಳಿತ ಮಂಡಳಿಗೆ ವಿಷ್ಯ ತಿಳಿಸಿ, ಅಲ್ಲಿ ಶಿಕ್ಷಕ ವೃoದದವರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಮಾನವೀಯತೆ ಮೆರೆದು ಒಟ್ಟುಗೂಡಿಸಿ ಕೊಟ್ಟ ಒಂದು ಲಕ್ಷಕ್ಕಿಂತಲೂ ಹಣವನ್ನ ಆಸ್ಪತ್ರೆಗೆ ತಂದು ಕೊಡ್ತಾರೆ. ಗ್ಯಾಸ್ ಸ್ಫೋಟದಿಂದ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು ತಿಳಿದ ಅದೇ ಶಾಲೆಯ ಪ್ರೈಮರಿ ಶಾಲೆಯ ಎಚ್. ಎಂ ಪ್ರಮೀಳಾ ಮತ್ತು ಆಶಾ ಟೀಚರ್ ಮಕ್ಕಳ ಎಲ್ಲಾ ಡಾಕ್ಯೂಮೆಂಟ್ಸ್ ಅನ್ನು ಯಾವುದಕ್ಕಾದ್ರೂ ಬೇಕಾಗಬಹುದೆಂದು ಶಾಲೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಶಾಲೆಗೆ ಅಲೆದಾಡಿದ್ದು ಕೂಡಾ ಖಂಡಿತ ಮರೆಯಲು ಅಸಾಧ್ಯ.
ಸಂತೋಷ್ ಸರ್, ಶಿಕ್ಷಣ ಇಲಾಖೆಯ ಡಿಡಿಪಿಐ ವೆಂಕಟೇಶ್ ಪಟಗಾರ್ ನ್ನು ಆಸ್ಪತ್ರೆಗೆ ಕರೆತಂದು ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರಕ್ಕಾಗಿ ಬೇಡಿಕೆ ಇಡ್ತಾರೆ. ಅದರ ಪರಿಹಾರ ಸಿಗಲೆಂದು ಈಗಲೂ ಇವರು ಮತ್ತು ಪ್ರಮೀಳಾ ಮೇಡಂ ಅಲೆದಾಡ್ತಿದ್ದಾರೆ. ಅದಲ್ಲದೆ, ದುರಂತ ಸಂಭವಿಸಿ ನಾಲ್ಕು ದಿನವಾದಾಗ ಮಕ್ಕಳ ತಾಯಿ ಮರಣ ಹೊಂದಿದಾಗ ಆ ತಾಯಿಯ ದಫನ ಕಾರ್ಯ ಮುಗಿಯುವವರೆಗೂ ಭಾವುಕರಾಗಿ ನಿಂತು ಕಂಬನಿ ಮಿಡಿಯುತ್ತಿದ್ದರು. ತಾಯಿ ತೀರಿ 14 ದಿವಸ ಆಗುವಾಗ ದೊಡ್ಡವಳು ಮಹದಿಯ ತೀವ್ರ ಇನ್ಫೆಕ್ಷನ್ ನಿಂದ ಮರಣ ಹೊಂದುತ್ತಾಳೆ.ಇವರ ಬೆಸ್ಟ್ ವಿದ್ಯಾರ್ಥಿನಿ ಕೂಡಾ ಹೌದು. ಮುಗ್ದೆ, ಸೌಮ್ಯ ಸ್ವಭಾವದ ಹುಡುಗಿಯಾದ್ರೂ ಕಲಿಕೆಯಲ್ಲಿ ಬಹಳಷ್ಟು ಮುಂದೆ ಇದ್ದಳು, ಬಹಳ ಸೈಲೆಂಟ್ ಹುಡುಗಿ ಎಂದು ಐಸಿಯು ಹೊರಗಡೆ ಇದ್ದಾಗ ನನ್ನೊಂದಿಗೆ ಹೇಳ್ತಾ ಇದ್ರು. ಅವಳು ಬದುಕಿ ಬರ್ತಾಳೆ ಎಂಬ ವಿಶ್ವಾಸ ಅವರಿಗೂ ನಮಗೂ ಇತ್ತು. ಕ್ಲಾಸಲ್ಲಿ ಅವಳ ಸ್ನೇಹಿತೆಯರು ಈಗ್ಲೂ ಅಳುತ್ತಿರುವುದು ನೋಡೋಕೆ ಆಗ್ತಿಲ್ಲ ಎನ್ನುತ್ತಿದ್ದರು. ಆದರೆ ದೇವನ ತೀರ್ಮಾನ ಬೇರೆನೇ ಇತ್ತು. ವಿಧಿ ಲಿಖಿತವನ್ನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂಬಂತೆ ನಮಗೆ ಎರಡನೇ ಆಘಾತ ಕಾದಿತ್ತು. ಇವಳ ಮರಣದ ವಿಷಯ ತಿಳಿದ ಕೂಡಲೇ ಸಂತೊಷ್ ಸರ್, ಕಂಬನಿ ಮಿಡಿಯುತ್ತಲೇ ಆಸ್ಪತ್ರೆಗೆ ಬರ್ತಾರೆ. ಅಲ್ಲಿಂದ ಮೃತದೇಹವನ್ನ ಮನೆಗೆ ಕೊಂಡೊಯ್ಯುವಾಗಲೂ ಅವರು ನನ್ನೊಂದಿಗೆ ಹೇಳಿದ ಮಾತು ” ಸೈಫ್, ನನಗೆ ಮುಖ ದರ್ಶನಕ್ಕೆ ಅವಕಾಶ ಸಿಗುತ್ತೋ ಇಲ್ವೋ ಗೊತ್ತಿಲ್ಲ. ದಯವಿಟ್ಟು ನನ್ನ ಪ್ರಿಯ ವಿದ್ಯಾರ್ಥಿನಿಯ ಮೃತದೇಹಕ್ಕೆ ಹೆಗಲು ಕೊಡ್ಲಿಕ್ಕಾದ್ರು ಒಂದು ಅವಕಾಶ ನೀಡುತ್ತೀರಾ? ಎಂದು ಕಣ್ಣoಚಲ್ಲಿ ನೀರು ತುಂಬಿ ಭಾವುಕರಾಗಿ ವಿನಂತಿಸಿದಾಗ ಏನೂ ಹೇಳಕ್ಕಾಗದೆ ಮೌನಕ್ಕೆ ಶರಣಾಗಿಬಿಟ್ಟಿದ್ದೆ. ಸೇರಿದ ಜನಸ್ತೋಮದ ಮಧ್ಯೆ ಮುಖ ದರ್ಶನಕ್ಕೆ ಎಲ್ಲರೂ ಅವರಿಗೆ ಅವಕಾಶ ಮಾಡಿ ಕೊಟ್ಟೆವು. ದಫನ ಕಾರ್ಯ ಮುಗಿಯೋ ತನಕ ಇದ್ದು, ರಾತ್ರಿ 1 ಗಂಟೆ ಹೊತ್ತಿಗೆ ಮಂಜನಾಡಿಯಿಂದ ತನ್ನ ಮನೆ ವಾಮಂಜೂರು ಗೆ ಹೊರಟರು. ಅಷ್ಟಕ್ಕೆ ವಿಧಿ ತನ್ನ ಕ್ರೂರ ಆಟವನ್ನ ಇನ್ನೂ ನಿಲ್ಲಿಸಲ್ಲ. ಎರಡನೇ ಆಘಾತದಿಂದ ಇನ್ನೂ ಚೇತರೀಸಿಕೊಳ್ಳದ ನಮಗೆ ಇನ್ನೊಂದು ಆಘಾತ. ಆ ವಿಚಿತ್ರ ಆಟಕ್ಕೆ ಸ್ಮಶಾನದoತಿದ್ದ ಊರು, ಮನೆ ಇನ್ನೂ ದುಃಖದ ಸಾಗರದಲ್ಲಿ ಮಡುಗಟ್ಟುತ್ತೆ.ಅಂದ್ರೆ ದೊಡ್ಡವಳ ಮರಣವಾಗಿ ಒಂದು ದಿವಸ ಕಳೆದಿರಲಿಲ್ಲ, ಇನ್ನೊಂದು 9 ವರ್ಷದ ಮಾಝಿಯಾ ಮಗು ಮರಣ ಹೊಂದುತ್ತೆ.ಈ ಸುದ್ದಿ ತಿಳಿದು ಸರ್ ಕೂಡಾ ಆಸ್ಪತ್ರೆಗೆ ಓಡೋಡಿ ಬರ್ತಾರೆ. ಪ್ರೈಮರಿ ಶಾಲೆಯ ಎಚ್ ಎಂ ಪ್ರಮೀಳಾ ಜತೆ ಇತರೆ ಶಿಕ್ಷಕರೂ ಶಾಲೆಯಿಂದ ಆಸ್ಪತ್ರೆಗೆ ಬಂದು ಕಣ್ಣೀರಿನೊಂದಿಗೆ ಮಗುವಿನ ಮುಖ ದರ್ಶನ ಪಡೀತಾರೆ.ಆ ಕ್ಷಣದಲ್ಲಿ ಅಲ್ಲಿದ್ದ ಪೊಲೀಸರ, ಡಾಕ್ಟರ್ ಗಳ ಕಣ್ಣುಗಳೂ ಒದ್ದೆಯಾಗಿತ್ತು. ಸಂತೋಷ್ ಸರ್, ಇವಳ ದಫನ ಕಾರ್ಯ ಕೂಡಾ ಮುಗಿಯೋವರೆಗೂ ನಿಂತು, ಮೂರು ಖಬರ್ ಬಳಿ ತುಂಬಿದ ಕಣ್ಣೀರಿನೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲಿದ್ದ ಮುಸ್ಲಿಂ ಧರ್ಮಗುರುಗಳು ಕೂಡಾ ಇಂತಹ ಅಧ್ಯಾಪಕನನ್ನ ಪಡೆದ ಈ ವಿದ್ಯಾರ್ಥಿಗಳು ಧನ್ಯರು ಎಂದು ಅವರನ್ನ ಅಲ್ಲೇ ಶ್ಲಾಘಿಸಿದರು.ಅಲ್ಲಿದ್ದ ಕುಟುಂಬಿಕರು,ಊರ ಜನರು ಕೂಡಾ ಸರ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡ್ತಿದ್ರು ಶಿಕ್ಷಕರೆಂದರೆ ಹೀಗಿರಬೇಕೆಂದು. ಅವತ್ತು ಕೂಡ ರಾತ್ರಿ 12 ಗಂಟೆ ಹೊತ್ತಿಗೆ ನಮಗೆಲ್ಲ ಸ್ವಾoತನ ಪಡಿಸಿ, ಮಕ್ಕಳ ತಂದೆಯೊಂದಿಗೆ ಇದ್ದು ಸಮಾಧಾನ ಹೇಳಿ,ಧೈರ್ಯ ಕೊಟ್ಟು ನಿರ್ಗಮಿಸ್ತಾರೆ.
ಬಹುಷಃ ಇಂತಹ ಹೃದಯವಂತ ಶಿಕ್ಷಕನನ್ನ ಪಡೆದ ಆ ಮಕ್ಕಳು ಪುಣ್ಯವಂತರೇನೋ. ವಿದ್ಯಾರ್ಥಿಗಳ ಬದುಕು ಯಾವಾಗಲೂ ಹಸನಾಗಿರಬೇಕು ಎಂದು ಹಾರೈಸುವ ಈ ಒಳ್ಳೆಯ ಮನಸ್ಸುಗಳು ಇಂತಹ ವಿಷಮ ಸ್ಥಿತಿಯಲ್ಲಿ ವಿಧಿ ಲೀಲೆಯ ಮುಂದೆ ಏನೂ ಮಾಡಕ್ಕಾಗದ ಪರಿಸ್ಥಿತಿಯಲ್ಲಿರ್ತಾರೆ. ಶಾಲೆಯಲ್ಲಿ ಶ್ರದಾಂಜಲಿ, ಪ್ರಾರ್ಥನೆ ಎಲ್ಲಾನೂ ನಡೆಸ್ತಾ ಇದ್ರೂ ಒಂದೇ ಒಂದು ವಿಡಿಯೋ ತೆಗೆದಿಲ್ಲ. ಫೋಟೋ ತೆಗೆದಿಲ್ಲ.ಒಟ್ಟು ಮಾಡಿದ ಹಣ ಕೊಡುವಾಗಲೂ ಫೋಟೋ ತೆಗೆಯೋಕೆ ನಿರಾಕರಿಸ್ತಾರೆ. ಇತ್ತೀಚಿಗೆ ನಾವು ಸಮಾಜದಲ್ಲಿ, ಶಿಕ್ಷಣದಲ್ಲೂ ಇಂದು ಮಾನವೀಯತೆ ಕಾಣದಾಗಿದೆ ಎಂದು ಹೇಳ್ತಿರ್ತೀವಿ. ಆದ್ರೆ ಇದೆಲ್ಲದರ ಮಧ್ಯೆ ಇಂತಹ ಮಾನವೀಯತೆ ಮೆರೆಯುವ, ಹೃದಯವಂತ ಶಿಕ್ಷಕರು ಇರ್ತಾರೆ ಅಂದ್ರೆ ನಿಜಕ್ಕೂ ಗ್ರೇಟ್. ಆ ಶಾಲೆಯ ಎಲ್ಲಾ ಶಿಕ್ಷಕರಿಗೂ ನನ್ನ, ಕುಟುಂಬದ ಮತ್ತು ಎಲ್ಲರ ಪರವಾಗಿ ಧನ್ಯವಾದಗಳು🙏🏻.
ಸರ್, ನಮ್ಮೊಂದಿಗೆ 22 ದಿವಸಗಳ ಕಾಲ ಆಸ್ಪತ್ರೆಯಲ್ಲಿ ಒಟ್ಟಿಗೆ ಇದ್ದು, ಮಕ್ಕಳ ಜೀವ ಉಳಿಸಲು ಎಲ್ಲಾ ರೀತಿಯ ನಮ್ಮ ಪ್ರಯತ್ನಕ್ಕೆ ನಿಮ್ಮ ಮತ್ತು ನಿಮ್ಮ ಶಾಲೆಯ ಶಿಕ್ಷಕರ, ಆಡಳಿತ ಮಂಡಳಿಯ ಸಹಕಾರನೂ ಇತ್ತು. ಆದ್ರೂ ಎರಡು ಜೀವವನ್ನ ಉಳಿಸೋಕೆ ಸಾಧ್ಯವಾಗಿಲ್ಲ. ಆದ್ರೂ ನಮಗೆ ಸಾಂತ್ವನ ಪಡಿಸ್ತಾ, ಧೈರ್ಯ ಕೊಡ್ತಾ,ನಮ್ಮ ಕಣ್ಣೀರಲ್ಲಿ 22 ದಿವಸನೂ ಜತೆಯಾಗಿದ್ದಕ್ಕೆ ಕುಟುಂಬದ ಪರವಾಗಿ,ಎಲ್ಲರ ಪರವಾಗಿಯೂ ತುಂಬು ಹೃದಯದ ಕೃತಜ್ಞತೆಗಳನ್ನ ಸಲ್ಲಿಸ್ತೀನಿ ಸರ್. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಶೈಕ್ಷಣಿಕ ರಂಗದಲ್ಲಿ ಸೇವೆ ನೀಡಲು ಮತ್ತು ಮಾನವೀಯ ಸೇವೆ ನೀಡಲು ಶಕ್ತಿ ನೀಡಲಿ.