ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯಲ್ಲಿ ಕಳೆದ ಗುರುವಾರ ರಾತ್ರಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ನಡು ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆಗೈದಿದ್ದ ಕಾಮುಕನನ್ನು ಹೆಡೆಮುರಿ ಕಟ್ಟುವಲ್ಲಿ ಮೂಡಬಿದ್ರೆ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಇರುವೈಲಿನ ಅರ್ಶದ್ (21) ಎಂದು ಗುರುತಿಸಲಾಗಿದೆ. ಇಲ್ಲಿನ ಆಳ್ವಾಸ್ ರಸ್ತೆಯ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅರ್ಶದ್ ಪದೇ ಪದೇ ಬಂದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇವರಿಬ್ಬರ ಮಧ್ಯೆ ಪರಿಚಯ ಬೆಳೆದಿದ್ದು ಇದನ್ನು ತಿಳಿದ ಮನೆಯವರು ಆಕೆಯನ್ನು ಕೆಲಸಕ್ಕೆ ಕಳುಹಿಸಿದೇ ಮನೆಯಲ್ಲಿ ಇರಿಸಿದ್ದರು.
ಯುವತಿ ಗುರುವಾರ ಸಂಜೆ ಮೂಡಬಿದ್ರೆ ಪೇಟೆಗೆ ಬಂದು ಟೈಲರ್ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅರ್ಶದ್ ಅಡ್ಡಗಟ್ ಟಿಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಜಗಳವಾಡಿ ಸಾರ್ವಜನಿಕ ರಸ್ತೆಯಲ್ಲಿ ಯುವತಿಗೆ ಹಲ್ಲೆ ನಡೆಸಿ ಧಮ್ಕಿ ಹಾಕಿದ್ದ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.