ಮಂಗಳೂರು: “ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಬರುವ ಜೂ.3ರಂದು ನಡೆಯಲಿದ್ದು ನಾನು ಓರ್ವ ಹೃದ್ರೋಗ ತಜ್ಞನಾಗಿ ಮತ್ತು ಮೆಡಿಕಲ್ ಕಾಲೇಜ್ ಶಿಕ್ಷಕನಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ” ಎಂದು ಹೇಬ್ರಿಬೀಡು ಡಾ. ನರೇಶ್ಚಂದ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಶಿಕ್ಷಕರ ಜೊತೆಗೆ ಈಗಾಗಲೇ ಚರ್ಚೆ ಮಾಡಿದ್ದು ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹುಡುಕಲು ಮುಂದಾಗಿದ್ದೇನೆ. ಮೇ 16ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಸುಶಿಕ್ಷಿತ ಮತದಾರರು ಇರುವ ಕಾರಣ ಎಲ್ಲರ ವಿಶ್ವಾಸ ಗಳಿಸಿಕೊಂಡು ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದೇನೆ” ಎಂದರು.
ನೈರುತ್ಯ ಶಿಕ್ಷಕರ ಕ್ಷೇತ್ರ ರಚನೆಯಾದ ಬಳಿಕ ಎಲ್ಲೋ ಒಂದೆರಡು
ಸಂದರ್ಭ ಹೊರತುಪಡಿಸಿ ರಾಜಕಾರಣಿಗಳು, ಶಿಕ್ಷಕರೇ ಅಲ್ಲದವರು ಚುನಾಯಿತರಾಗಿರುವುದು ವಿಪರ್ಯಾಸವಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 22 ಸಾವಿರಕ್ಕೂ ಅಧಿಕ ಮಂದಿ ಶಿಕ್ಷಕರು ಮತದಾರರಾಗಿ
ನೋಂದಾಯಿಸಿಕೊಂಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಚನ್ನಗಿರಿ ತಾಲೂಕುಗಳು ವ್ಯಾಪ್ತಿಗೆ ಒಳಪಟ್ಟಿದ್ದು ಶಿಕ್ಷಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ದುಡಿಯುವುದಾಗಿ ಹೇಳಿದರು.