ಸುರತ್ಕಲ್: “ಎನ್ ಐಟಿಕೆ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸುದೀರ್ಘ 40 ವರುಷಗಳ ಭವ್ಯ ಇತಿಹಾಸವಿದ್ದು ನೂರಾರು ವೈದ್ಯರನ್ನು, ವಕೀಲರನ್ನು, ಇಂಜಿನಿಯರ್, ಪೊಲೀಸರನ್ನು, ಶಿಕ್ಷಕರನ್ನು, ಬ್ಯಾಂಕರ್‌ಗಳನ್ನು ಜೊತೆಗೆ ಅದೆಷ್ಟೋ ಉದ್ಯಮಿಗಳನ್ನು ಸಮಾಜಕ್ಕೆ ನೀಡಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ 100 ಸಾಧನೆ ಮಾಡಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹತ್ತಾರು ಹೊಸ ಕಾರ್ಯಕ್ರಮದತ್ತ ನಮ್ಮ ಶಾಲೆ ಮುಂದಡಿ ಇಟ್ಟಿದೆ” ಎಂದು ಎನ್ ಐಟಿಕೆ ಕನ್ನಡ ಮಾಧ್ಯಮ ಪ್ರೌಢಶಾಲಾಭಿವೃದ್ಧಿ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಅಧ್ಯಕ್ಷ ವಸಂತ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಮೇ 29ರಂದು ಶಾಲೆ ಪುನರಾರಂಭಗೊಳ್ಳಲಿದ್ದು ಈ ದಿನ ಶಾಲಾ ಪ್ರಾರಂಭೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ವಿಜೃಂಭಣೆಯ ಮಕ್ಕಳ ಜಾಥಾ, ಮಕ್ಕಳು, ಪೋಷಕರು ಮತ್ತು ಶಿಕ್ಷಕರಿಂದ ಅಕ್ಷರ ಜ್ಯೋತಿ ಬೆಳಗಿಸುವಿಕೆ, ಉಡುಗೊರೆಯೊಂದಿಗೆ ವಿಶಿಷ್ಟವಾಗಿ ಮಕ್ಕಳ ಸ್ವಾಗತಿಸುವಿಕೆ, ಸಾಧಕ ವಿದ್ಯಾರ್ಥಿಗಳ ಗೌರವಿಸುವಿಕೆ ಮತ್ತು ಶೇಕಡಾ ನೂರು ಫಲಿತಾಂಶ ಬರುವಲ್ಲಿ ಶ್ರಮಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಮುಕ್ಕ ಜಂಕ್ಷನ್‌ನಿಂದ ಮಕ್ಕಳ ಅಕ್ಷರ ಜಾಥಾ ಹೊರಡಲಿದೆ” ಎಂದವರು ಮಾಹಿತಿ ನೀಡಿದರು.
ಬಳಿಕ ಮಾತಾಡಿದ ಶಿಕ್ಷಣ ಸಂಸ್ಥೆ ಪ್ರಾಂಶುಪಾಲೆ ರಶ್ಮಿ ಅವರು, “ಮುಂದಿನ ಬಾರಿಯೂ ಶೇ.100 ಶೈಕ್ಷಣಿಕ ಸಾಧನೆ ಮಾಡುವ ವಿಶ್ವಾಸವಿದೆ. ಎನ್ ಐಟಿಕೆ ಹಳೆ ವಿದ್ಯಾರ್ಥಿಗಳು ನಮಗೆ ತುಂಬ ಸಹಕಾರ ನೀಡುತ್ತಿದ್ದಾರೆ. ಇದರಿಂದ ಸಂಬಳಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಸರಕಾರ ನಮ್ಮನ್ನು ಗಣನೆಗೆ ತೆಗೆದುಕೊಂಡು ಸಂಬಳ ನೀಡಬೇಕಾಗಿ ಅಗ್ರಹಿಸುತ್ತಿದ್ದೇವೆ” ಎಂದರು.
“ಆಂಗ್ಲಮಾಧ್ಯಮ ಶಾಲೆಗೆ ಕಡಿಮೆ ಇಲ್ಲದಂತೆ ನಮ್ಮ ಶಾಲೆಯಲ್ಲಿ ಶಿಕ್ಷಣವನ್ನು ನೀಡುವ ಯೋಚನೆ ನಮ್ಮದು. ನಮ್ಮಲ್ಲಿ ಕಲಿಯುವ ಮಕ್ಕಳಿಗೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಸವಲತ್ತು ನೀಡಲಾಗುವುದು. ಕಲಿಕೆ, ಜೊತೆಗೆ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ, ವೈಜ್ಞಾನಿಕ ಮನೋಭಾವದಲ್ಲಿ ಮಕ್ಕಳನ್ನು ಬೆಳೆಸುವ ವಾತಾವರಣವನ್ನು ಸೃಷ್ಟಿಸಿಕೊಂಡಿದ್ದೇವೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ನಮ್ಮ ಶಾಲೆ ಒಂದು ಉತ್ತಮ ಅವಕಾಶವನ್ನು ನೀಡುತ್ತಿದೆ. ಉಚಿತ ಶಿಕ್ಷಣ, ಊಟ, ಸಮವಸ್ತ್ರ, ಜೊತೆಗೆ ವಾರ್ಷಿಕ ವಿದಾರ್ಥಿ ವೇತನವೂ ಸಿಗಲಿದೆ. ಇದಲ್ಲದೆ ಬಸ್ ಪ್ರಯಾಣಭತ್ಯೆಯನ್ನೂ ನೀಡಲಾಗುವುದು. ಅಗತ್ಯವುಳ್ಳವರಿಗೆ ಸೈಕಲ್ ನೀಡಲಾಗುವುದು. ಶಿಕ್ಷಣ ಮಾತ್ರವಲ್ಲದೆ ಯಕ್ಷಗಾನ, ಸಂಗೀತ, ನೃತ್ಯ, ಚಿತ್ರಕಲೆ, ಕರಾಟೆ ಇವೆಲ್ಲವನ್ನೂ ಉಚಿತವಾಗಿ ನೀಡಲಾಗುವುದು. ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ವಿಶೇಷ ತರಭೇತಿಯನ್ನೂ ಉಚಿತವಾಗಿ ನೀಡಲಾಗುವುದು” ಎಂದು ಹೇಳಿದರು.
ನರೇಶ್ ಸಸಿಹಿತ್ಲು ಮಾತನಾಡಿ, “ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಈ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಲಿದ್ದೇವೆ. ಮಕ್ಕಳನ್ನು ಶಾಲೆಗೆ ಕರೆತರಲು ಆಕರ್ಷಕ ಜಾಥಾ ಆಯೋಜಿಸಲಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಕೋಚಿಂಗ್ ಕ್ಲಾಸ್ ಆರಂಭಕ್ಕೆ ಚಿಂತನೆ ನಡೆದಿದೆ” ಎಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದ್ಯಾವಪ್ಪ ಮತ್ತಿತರರು ಉಪಸ್ಥಿತರಿದ್ದರು.