ಸುರತ್ಕಲ್: ಸಿಮೆಂಟ್ ಮಿಕ್ಸರ್ ಲಾರಿ ಹರಿದು ಕುಳಾಯಿಯ ಖಾಸಗಿ ವಿದ್ಯಾಸಂಸ್ಥೆಯ ಟೀಚರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಣಂಬೂರು ಬೀಚ್ ಬಳಿ ಶುಕ್ರವಾರ ಸಂಜೆ ವರದಿಯಾಗಿದೆ.
ಮೃತರನ್ನು ಕುಳಾಯಿ ರೆಹಾನ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕಿ ಹೊನ್ನಕಟ್ಟೆ ನಿವಾಸಿ ಪೂರ್ಣಿಮಾ (29) ಎಂದು ತಿಳಿದು ಬಂದಿದೆ. ಲಾರಿ ಚಾಲಕ ದೀಪಕ್ ಸುನಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ಣಿಮಾ ಅವರು ತನ್ನ ಸಹೋದರಿ ಮಾನಸ ಉಡುಪ ಅವರೊಂದಿಗೆ ದ್ವಿಚಕ್ರವಾಹನದಲ್ಲಿ ಉರ್ವಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ ಪಣಂಬೂರು ಗೇಲ್ ಗ್ಯಾಸ್ ಪಂಪ್ ಬಳಿ ತಲುಪುತ್ತಿದ್ದಂತೆ ಹಿಂಭಾಗದಿಂದ ಸ್ಕೂಟರ್ ನ ಎಡಭಾಗದಲ್ಲಿ ಅತೀ ವೇಗ ಮತ್ತು ಅಜಾಗರೂಕತೆ ಬಂದ ಸಿಮೆಂಡ್ ಮಿಕ್ಸರ್ ಲಾರಿ ಸ್ಕೂಟರ್ ನ ಹ್ಯಾಂಡಲ್ ಗೆ ತಾಗಿದೆ.
ಈ ವೇಳೆ ಸ್ಕೂಟರ್ ನ ಹಿಂಬದಿ ಸವಾರರಾಗಿ ತೆರಳುತ್ತಿದ್ದ ಪೂರ್ಣಿಮಾ ಅವರು ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿದ್ದು, ಅವರ ಹೊಟ್ಟೆಯ ಮೇಲೆ ಸಿಮೆಂಟ್ ಮಿಕ್ಸರ್ ಲಾರಿಯ ಹಿಂಭಾಗದ ಚಕ್ರ ಹರಿದು ಮೃತಪಟ್ಟರೆಂದು ತಿಳಿದು ಬಂದಿದೆ.