“ಸೌಹಾರ್ದತೆಯಿಂದ ಸ್ವಸ್ಥ ಸಮಾಜ ನಿರ್ಮಾಣ” -ಯು.ಟಿ. ಖಾದರ್

ದೇರಳಕಟ್ಟೆಯಲ್ಲಿ ಅಂಬರ್ ಗ್ರೂಪ್ ನ “ಕ್ಯಾಪಿಟಲ್ ಸ್ಕ್ವೇರ್” ಗೆ ಶಿಲಾನ್ಯಾಸ

ಮಂಗಳೂರು: ಗೃಹ ನಿರ್ಮಾಣ ಮತ್ತು ವ್ಯಾಪಾರ ಸಂಕೀರ್ಣ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಅಂಬರ್ ಗ್ರೂಪ್ ನ ನೂತನ ಯೋಜನೆ “ಕ್ಯಾಪಿಟಲ್ ಸ್ಕ್ವೇರ್” ಇದರ ಶಿಲಾನ್ಯಾಸ ಕಾರ್ಯಕ್ರಮವು ಶನಿವಾರ ಮುಂಜಾನೆ ದೇರಳಕಟ್ಟೆಯಲ್ಲಿ ಜರುಗಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ನೂತನ ಯೋಜನೆಯ ನೀಲನಕ್ಷೆ ಹಾಗೂ ಬ್ರೌಷರ್ ಬಿಡುಗಡೆಗೊಳಿಸಿದರು. ಬಳಿಕ ಮಾತಾಡಿದ ಅವರು, “ಸೌಹಾರ್ದತೆಯಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಕಟ್ಟಡ ಕಟ್ಟುವಾಗ ನೆರೆಹೊರೆಯವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವವರೇ ಉತ್ತಮ ಬಿಲ್ಡರ್ ಆಗಿರುತ್ತಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಅಂಬರ್ ಗ್ರೂಪ್ ನಿಂದ ಈ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶುಭ ಹಾರೈಸುತ್ತೇನೆ. ಇಂತಹ ಕಟ್ಟಡಗಳಿಂದ ಸುತ್ತಮುತ್ತಲಿನ ಜಗಕ್ಕೂ ಡಿಮ್ಯಾಂಡ್ ಬರುತ್ತದೆ ಇಂತಹ ಯೋಜನೆಗಳಿಂದ ಇಡೀ ಊರು ಅಭಿವೃದ್ಧಿಯಾಗುತ್ತದೆ. ಎಲ್ಲರೂ ಅಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕು” ಎಂದರು.


ಆರತಿ ಕೃಷ್ಣ ಮಾತನಾಡಿ, “ಜನರಿಗೆ ಉತ್ತಮ ಗುಣಮಟ್ಟದ ಮನೆ ಮತ್ತು ವ್ಯಾಪಾರ ಮಳಿಗೆಗಳನ್ನು ನಿರ್ಮಾಣ ಮಾಡುವ ಈ ಯೋಜನೆ ಯಶಸ್ಸಾಗಲಿ” ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಎಸ್.ಎಂ.ಆರ್. ರಶೀದ್ ಹಾಜಿ ಅವರು, “ದೇರಳಕಟ್ಟೆಯಲ್ಲಿ ಒಂದೇ ಕಡೆಯಲ್ಲಿ ಜನರಿಗೆ ಗೃಹ ನಿರ್ಮಾಣ ಮತ್ತು ವ್ಯಾಪಾರ ಸಂಕೀರ್ಣಕ್ಕೆ ಇಂದು ಚಾಲನೆ ನೀಡಲಾಗಿದೆ. ಆದಷ್ಟು ಬೇಗ ಇದು ನಿರ್ಮಾಣಗೊಂಡು ಜನರ ಬಳಕೆಗೆ ಲಭಿಸಲಿ” ಎಂದರು.


ಉದ್ಯಮಿ ಕಣಚೂರು ಮೋನು ಮಾತನಾಡಿ, “ದೇರಳಕಟ್ಟೆ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ. ಬೆಳೆಯುತ್ತಿರುವ ನಗರವಾಗಿರುವ ಇಲ್ಲಿ ಹೊಚ್ಚ ಹೊಸ ಯೋಜನೆಗಳು ಜಾರಿಗೆ ಬರಬೇಕು. ನಾವು ಒಬ್ಬರೇ ಬೆಳೆದರೆ ಸಾಲದು ನಮ್ಮ ಜೊತೆ ಇಡೀ ಸಮೂಹ, ಸಮುದಾಯದ ಜನರು ಕೂಡಾ ಬೆಳೆಯಬೇಕು. ನಮ್ಮ ನೆಲದ ಕಾನೂನನ್ನು ಗೌರವಿಸಬೇಕು. ನಮ್ಮ ಬೆಳವಣಿಗೆಯಲ್ಲಿ ಜನರಿಗೆ ಸಮಸ್ಯೆಯಾಗಬಾರದು” ಎಂದರು.


ಕೃಷ್ಣ ಪಾಲೇಮಾರ್ ಮಾತಾಡಿ, “ನನ್ನ ಮಿತ್ರನ ಮಗ ಗೃಹ ನಿರ್ಮಾಣದಲ್ಲಿ ಕೈಜೋಡಿಸಿರುವುದು ಖುಷಿಯ ವಿಚಾರ. ಇವತ್ತು 60% ಜನರಿಗೆ ಮನೆಯಿಲ್ಲ. ಸರಕಾರ ಒತ್ತುಕೊಟ್ಟಲ್ಲಿ ಜನರಿಗೆ ಮನೆ ನಿರ್ಮಾಣ ಮಾಡುವುದು ಕಷ್ಟವಲ್ಲ. ಸರಕಾರದ ಪ್ರೋತ್ಸಾಹ ಅತ್ಯವಶ್ಯವಾಗಿದೆ. ಝುಬೆರ್ ಅವರು ಆದಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಿ ಜನರಿಗೆ ಪ್ರಾಮಾಣಿಕತೆಯಿಂದ ಮುಟ್ಟಿಸಿದಲ್ಲಿ ಜನರ ಆಶೀರ್ವಾದ ಸದಾ ಇರುತ್ತದೆ” ಎಂದರು.
ವೇದಿಕೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಎಐಸಿಸಿ ಕಾರ್ಯದರ್ಶಿ ಡಾ. ಆರತಿ ಕೃಷ್ಣ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಉದ್ಯಮಿ ಕಣಚೂರು ಸಂಸ್ಥೆಗಳ ಸ್ಥಾಪಕ ಹಾಜಿ ಯು.ಕೆ. ಮೋನು, ಉದ್ಯಮಿ ಎಸ್.ಎಂ.ಆರ್. ರಶೀದ್ ಹಾಜಿ, ಫೋರ್ ವಿಂಡ್ಸ್ ಮಾಲಕ ಪುಷ್ಪರಾಜ್ ಶೆಟ್ಟಿ, ಡಾ.ಯಾಸಿರ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದಾಮೋದರ್, ಮುಹಮ್ಮದ್ ಸವುದ್, ಝುಬೆರ್ ಅಂಬರ್, ಆರಾಫತ್, ಝಮಿರ್ ಅಂಬರ್ ಮತ್ತಿತರರು ಉಪಸ್ಥಿತರಿದ್ದರು.

ಶಾಹಿಲ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!