“ಕೇಸ್ ಬಿದ್ರೆ ಭಯಪಡಲ್ಲ, ಮುಂದಿನ ದಿನಗಳಲ್ಲಿ ಫ್ಯಾಕ್ಟರಿಗೆ ಬೀಗ ಜಡಿಯುತ್ತೇವೆ” -ಡಾ.ವೈ. ಭರತ್ ಶೆಟ್ಟಿ 

ವಾಮಂಜೂರು “ವೈಟ್ ಗ್ರೋ” ಅಣಬೆ ಫ್ಯಾಕ್ಟರಿ ವಿರುದ್ಧ ಬೃಹತ್ ಪ್ರತಿಭಟನೆ

ಸುರತ್ಕಲ್: ಬಿಜೆಪಿ ಮಂಗಳೂರು ನಗರ ಉತ್ತರದ ವತಿಯಿಂದ ವಾಮಂಜೂರು ವೈಟ್ ಗ್ರೋ ಅಣಬೆ ಫ್ಯಾಕ್ಟರಿ ವಿರುದ್ಧ ಶನಿವಾರ ಬೃಹತ್ ಪ್ರತಿಭಟನೆ ಜರುಗಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು, “ಮಾಜಿ ಶಾಸಕ ಲೋಬೊ ಆವರೇ ನೀವು ಮಂಗಳೂರಲ್ಲಿ ಇದ್ದು ವಾಮಂಜೂರಿನ ಜನರಿಗೆ ವಾಸನೆ ಬರಲ್ಲ ಅಂತ ಹೇಳ್ಬೇಡಿ, ನೀವು ಒಂದು ರಾತ್ರಿ ಬಂದು ಇಲ್ಲಿ ವಾಸ್ತವ್ಯ ಮಾಡಿ. ನಿಮ್ಮ ಜಿಲ್ಲಾಧಿಕಾರಿ, ಮನಪಾ ಕಮಿಷನರ್, ಅಧಿಕಾರಿಗಳನ್ನು ಕೂಡ ಒಂದೆರಡು ದಿನ ಇಲ್ಲಿ ಬಂದು ವಾಸ್ತವ್ಯ ಮಾಡುವಂತೆ ಹೇಳಿ. ಆಗ ನಿಮಗೆ ಸಮಸ್ಯೆ ಆಗಿಲ್ಲ ಅಂತಾದ್ರೆ ಒಪ್ಪಿಕೊಳ್ಳೋಣ. ಇಲ್ಲಿ ಅಣಬೆ ಫ್ಯಾಕ್ಟರಿಯ ದುರ್ನಾತದಿಂದ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಮಕ್ಕಳು ವಾಂತಿ ಮಾಡಿ ಅಸ್ವಸ್ಥರಾಗುತ್ತಿದ್ದಾರೆ. ಜನರು ದುಡಿದು ಮನೆಗೆ ಬರುವಾಗ ವಾಸನೆಯಿಂದ ಮೂಗು ಮುಚ್ಚಿ ಬದುಕಬೇಕಾಗಿದೆ. ನಾನಿಲ್ಲಿ ರಾಜಕೀಯ ಮಾಡಲು ಬಂದಿಲ್ಲ ವೋಟ್ ಕೇಳುವುದಕ್ಕೂ ಬಂದಿಲ್ಲ. ನೀವು ಯಾರಿಗೆ ವೋಟ್ ಹಾಕ್ತಿರೋ ಅವರಿಗೆ ಹಾಕಿ ನನಗೆ ನಿಮ್ಮ ವೋಟ್ ಬೇಡ. ಆದರೆ ಜನರ ಪರವಾಗಿ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ. ಅಣಬೆ ಫ್ಯಾಕ್ಟರಿಯನ್ನು ಆದಷ್ಟು ಬೇಗ ಮುಚ್ಚುವ ಮೂಲಕ ಮಾನವೀಯತೆ ಪ್ರದರ್ಶಿಸಿ. ನಮಗೆ ಶಾಂತವಾಗಿ ಪ್ರತಿಭಟನೆ ನಡೆಸಲು ಗೊತ್ತಿದೆ ಉಗ್ರವಾಗಿ ಹೋರಾಟ ಮಾಡುವುದಕ್ಕೂ ಗೊತ್ತಿದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ಮುಂದೆ ನಾವು ಇದೇ ರೀತಿ ಶಾಂತವಾಗಿ ಪ್ರತಿಭಟನೆ ನಡೆಸುವುದಿಲ್ಲ. ಅಣಬೆ ಫ್ಯಾಕ್ಟರಿ ಮುಚ್ಚದೆ ಇದ್ದಲ್ಲಿ ನಾವೇ ಮುತ್ತಿಗೆ ಹಾಕಿ ಬೀಗ ಜಡಿಯುತ್ತೇವೆ. ಆಗ ಒಂದೆರಡು ಕೇಸ್ ಬೀಳಬಹುದು, ಆರೆಸ್ಟ್ ಆಗಬಹುದು. ಅದಕ್ಕೆಲ್ಲ ನಾವು ಹೆದರಿ ಕೂರುವುದಿಲ್ಲ. ಮುಂದೆ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಕಾಂಗ್ರೆಸ್ ಸರಕಾರ, ಜಿಲ್ಲಾಡಳಿತ ಹಾಗೂ ಮಾಜಿ ಶಾಸಕ ಜೆ.ಆರ್. ಲೋಬೊ ನೇರ ಹೊಣೆಯಾಗಲಿದ್ದಾರೆ” ಎಂದು ಗುಡುಗಿದರು.


ಬಳಿಕ ಮಾತಾಡಿದ ಬಿಜೆಪಿ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, “ನಾವು ಬಿಜೆಪಿ ಕಾರ್ಯಕರ್ತರು ನ್ಯಾಯಯುತ ಹೋರಾಟದಲ್ಲಿ ಕೇಸ್ ಬಿದ್ದರೆ ಭಯ ಪಡುವವರಲ್ಲ. ಮೊದಲು ಶಾಂತಿಯಿಂದ ಪ್ರತಿಭಟನೆ ನಡೆಸಿ ಒಂದಿಷ್ಟು ದಿನ ಸಮಯ ಕೊಡುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಿದ್ದೇವೆ. ಇಲ್ಲಿ ಒಬ್ಬ ಅಧಿಕಾರಿ ಬಂದು ಸಾರ್ವಜನಿಕರಿಗೆ ಏನೂ ತೊಂದರೆಯಿಲ್ಲ ಎನ್ನುತ್ತಿದ್ದಾನೆ. ಅವನು ಈ ಫ್ಯಾಕ್ಟರಿಯಿಂದ ಎಷ್ಟು ಹಣ ಸಂಪಾದನೆ ಮಾಡಿದ್ದಾನೆ ಎನ್ನುವುದನ್ನು ಹೇಳಲಿ” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ ಮಾತನಾಡಿ, “ಮಿಸ್ಟರ್ ಲೋಬೊ, ನಮ್ಮ ಹೆಣದ ಮೇಲೆ ನೀವು ಹಣ ಮಾಡುವುದು ಬೇಡ. ಇಲ್ಲಿನ ಅಣಬೆ ಫ್ಯಾಕ್ಟರಿ ಮುಚ್ಚದೆ ಇದ್ದಲ್ಲಿ ಹೈವೇ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಜನರಿಗೆ ರೋಗ ಹರಡುತ್ತಿರುವ ಫ್ಯಾಕ್ಟರಿ ಬಂದ್ ಮಾಡುವ ತನಕ ಪ್ರತಿಭಟನೆ ನಡೆಸುತ್ತೇವೆ” ಎಂದರು.


ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಲೋಹಿತ್ ಅಮೀನ್, ಕಾರ್ಪೋರೇಟರ್ ವರುಣ್ ಚೌಟ, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಕಾರ್ಪೋರೇಟರ್ ಹೇಮಲತಾ, ಸಂಗೀತಾ ನಾಯ್ಕ್, ಕಿರಣ್ ಕೋಡಿಕಲ್, ಮಾಜಿ ಮೇಯರ್ ಜಯಾನಂದ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

ಅಣಬೆ ಫ್ಯಾಕ್ಟರಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ಕೇಸ್ ಹಾಕುವುದಾಗಿ ಬೆದರಿಸುತ್ತಾರೆ. 15 ಕೋಟಿ ಖರ್ಚಾಗಿದೆ ಎನ್ನುತ್ತಾರೆ. ಇವರಿಗೆ ಹಣ ಮಾಡಲು ನಮ್ಮ ಮನೆಯ ಮಕ್ಕಳು ಬೇಕಾ? ನನ್ನ ಮಗು ಆಸ್ಪತ್ರೆ ಸೇರಿದೆ. ನನ್ನ ಮಗುವಿಗೆ ಏನಾದರು ಆದರೆ ಅದಕ್ಕೆ ಹೊಣೆ ಯಾರು? ಅಣಬೆ ಕಂಪೆನಿ ಆದಷ್ಟು ಬೇಗ ಮುಚ್ಚುವ ಮೂಲಕ ನಮ್ಮ ಅರೋಗ್ಯವನ್ನು ರಕ್ಷಿಸಬೇಕು”
-ಕಾರ್ಮಿನ್ ಲೋಬೊ
ಸ್ಥಳೀಯರು

error: Content is protected !!