ಮೂಲ್ಕಿ: ಇಲ್ಲಿನ ರಾ.ಹೆ.66 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿಯೊರ್ವಳು ದಾರುಣ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಪ್ರೀತಿಕ ಶೆಟ್ಟಿ(23) ಮೃತ ದುರ್ದೈವಿ.
ಘಟನೆಯ ವಿವರ:
ಮುಡಿಪು ಬಳಿಯ ಬಾಕ್ರಬೈಲ್ ಪಾತೂರು ನಿವಾಸಿ ಪ್ರೀತಿಕ ಶೆಟ್ಟಿ ಮೂಲ್ಕಿಯ ಖಾಸಗಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದು ವಾರದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಇವರು ಸ್ನೇಹಿತನ ಜೊತೆ ಉಡುಪಿ ಕಡೆಯಿಂದ ಮಂಗಳೂರಿನ ಕಡೆ ಆರ್ ಒನ್ 5 ಬೈಕ್ ನಲ್ಲಿ ಹೋಗುತ್ತಿದ್ದಾಗ ಮೂಲ್ಕಿ ಜಂಕ್ಷನ್ ಬಳಿ ಕಿನ್ನಿಗೋಳಿ ಕಡೆಯಿಂದ ಬರುತ್ತಿದ್ದ ಕಾರ್ ಹಠಾತ್ ಹೆದ್ದಾರಿಗೆ ತಿರುವು ಪಡೆಯುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಡಿಕ್ಕಿಯಾಗಿದೆ. ಘಟನೆಯಲ್ಲಿ ಪ್ರೀತಿಕ ಹೆದ್ದಾರಿಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.