ಹಳೆಯಂಗಡಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಪಾವಂಜೆ ಬಳಿಯ ನಿವಾಸಿ ದೇವದಾಸ್ ಕುಲಾಲ್(58) ಜುಲೈ 25ರಿಂದ ನಾಪತ್ತೆಯಾಗಿದ್ದು ಇಂದು ಸಂಜೆ ಅವರ ಶವ ಪಾವಂಜೆ ದೇವಸ್ಥಾನ ಬಳಿಯ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಕೀಟನಾಶಕ ಪ್ಯಾಕೆಟ್ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶವ ಸಂಪೂರ್ಣ ಕೊಳೆತಿದ್ದು ತಲೆಯ ಭಾಗ ಯಾವುದೋ ಪ್ರಾಣಿ ತಿಂದಿರುವ ಸಾಧ್ಯತೆಯಿದೆ. ಇಂದು ಸಂಜೆ ಪರಿಸರದಲ್ಲಿ ವಾಸನೆ ಬರುತ್ತಿದ್ದು ನೋಡಿದಾಗ ಕೊಳೆತ ಶವ ಪತ್ತೆಯಾಗಿದೆ. ಅಂಗಿ, ಪ್ಯಾಂಟ್ ನಿಂದ ಶವ ದೇವದಾಸ್ ಅವರದ್ದೆಂದು ಅಂದಾಜಿಸಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಸುರತ್ಕಲ್ ನಿವಾಸಿ ಸಂದೇಶ್ ಎಂಬಾತ ಹಣ ದ್ವಿಗುಣ ಮಾಡಿಕೊಡುವುದಾಗಿ ಹಲವಾರು ಮಂದಿಗೆ ಮಕ್ಮಲ್ ಟೋಪಿ ಹಾಕಿದ್ದು ಈತನ ಬಲೆಗೆ ಬಿದ್ದಿದ್ದ ದೇವದಾಸ್ ದುಡ್ಡಿನ ಆಸೆಗೆ ಬಿದ್ದು ಅಂದಾಜು 20 ಲಕ್ಷಕ್ಕೂ ಹೆಚ್ಚು ಹಣವನ್ನು ಆತನಿಗೆ ನೀಡಿದ್ದಾರೆನ್ನಲಾಗಿದೆ. ದೇವದಾಸ್ ತನ್ನ ಅಕ್ಕ, ಭಾವ, ಅಕ್ಕನ ಮಕ್ಕಳು, ಪತ್ನಿಯ ಬಳಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಪಡೆದುಕೊಂಡು ಅಡವಿಟ್ಟು ಹಣ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಹೀಗೆ ಚಿನ್ನಾಭರಣ ಪಡೆದು ಕೊಡದೇ ಇದ್ದಾಗ ಸಂಸಾರದಲ್ಲಿ ಕಿರಿಕಿರಿ ಆರಂಭವಾಗಿತ್ತು. ಹೀಗಾಗಿ 25ನೇ ತಾರೀಖು ಮನೆಯಿಂದ ಕೆಲಸಕ್ಕೆಂದು ಹೋದವರು ನಿಗೂಢವಾಗಿ ನಾಪತ್ತೆಯಾಗಿದ್ದರು.