ಸುರತ್ಕಲ್: “ರಾಜ್ಯದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧವನ್ನು ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರ ಜಾರಿಗೆ ತಂದಿದ್ದರೂ, ಗೋಕಟುಕರು ಅದನ್ನು ಉಲ್ಲಂಘಿಸುತ್ತಾ ಗೋಹತ್ಯೆ ನಿರಂತರವಾಗಿ ನಡೆಯುತ್ತಾ ಬರುತ್ತಿತ್ತು. ಮಂಗಳೂರು ನಗರ ಉತ್ತರದಲ್ಲಿ ಮೂರು ಕಡೆ ಅವ್ಯಾಹತವಾಗಿ ಗೋಹತ್ಯೆ ನಡೆಯುತ್ತಿರುವುದು ಶಾಸಕ ಡಾ. ಭರತ್ ಶೆಟ್ಟಿಯವರ ಗಮನಕ್ಕೆ ಬಂದ ತಕ್ಷಣ ಅವರು ಅದನ್ನು ರಾಜ್ಯ ಸರಕಾರದ ಕಾಯ್ದೆಯಲ್ಲಿರುವ ನಿಯಮಗಳನ್ನೇ ಬಳಸಿ ಆ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಸೂಚಿಸಿದ್ದರು. ಅಧಿಕಾರಿಗಳಿಗೆ ಸೂಚನೆ ನೀಡಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಂಡಿದ್ದರು. ಈ ಧೈರ್ಯವನ್ನು ರಾಜ್ಯದಲ್ಲಿ ತೋರಿಸಿದ ಮೊದಲ ಶಾಸಕರು ಡಾ. ಭರತ್ ಶೆಟ್ಟಿಯವರು” ಎಂದು ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ ಹೇಳಿದ್ದಾರೆ.
ಅವರು ಕ್ಷೇತ್ರವ್ಯಾಪಿ ಪ್ರಚಾರದಲ್ಲಿ ನಿರತರಾಗಿದ್ದಾಗ ಭೇಟಿಯಾದ ವರದಿಗಾರರೊಂದಿಗೆ ಮಾತನಾಡುತ್ತಾ ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಗೋಹಂತಕರಿಗೆ ಬಿಸಿ ಮುಟ್ಟಿಸುವ ಅಗತ್ಯ ಇತ್ತು. ಅವರು ಕಾಯ್ದೆ, ಕಾನೂನು, ನಿಯಮಗಳನ್ನು ಕ್ಯಾರೇ ಮಾಡುತ್ತಿರಲಿಲ್ಲ. ಅಂತವರನ್ನು ಕಾನೂನಿನ ಪರಿಧಿಯೊಳಗೆ ತರಲು ಧೈರ್ಯ, ಸಾಹಸ ಬೇಕು. ಅದನ್ನು ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ತೋರಿಸಿದ್ದಾರೆ. ಇದರ ನಂತರ ಜಿಲ್ಲೆಯಲ್ಲಿ ಅಕ್ರಮ ಕಸಾಯಿಗಳ ವಿರುದ್ಧ ಧ್ವನಿ ಪ್ರಬಲವಾಯಿತು ಎಂದು ಅವರು ತಿಳಿಸಿದರು. ಒಬ್ಬ ಶಾಸಕ ಸರಕಾರದ ನಿಯಮಗಳನ್ನು ಅನುಸರಿಸಿ ಏನೆಲ್ಲಾ ಮಾಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಡಾ. ಭರತ್ ಶೆಟ್ಟಿ. ಅವರು ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಿದ ನಂತರ ಅವರಿಗೆ ಮತಾಂಧರ ಬೆದರಿಕೆ ಕರೆಗಳು, ಒತ್ತಡ ಎಲ್ಲವೂ ಬಂದಿದೆ. ಆದರೂ ಎದೆಗುಂದದೆ ಅವರು ತಮ್ಮ ನಿಲುವಿನಲ್ಲಿ ಅಚಲರಾಗಿ ನಿಂತು ಮುನ್ನುಗ್ಗಿದ್ದಾರೆ. ಈ ಮೂಲಕ ರಾಜ್ಯ ಸರಕಾರ ಜಾರಿಗೆ ತಂದ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತಂದು ಗೋಪ್ರೇಮಿಗಳಲ್ಲಿ ಭರವಸೆ ಮೂಡಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ತಲವಾರು ತೋರಿಸಿ ಮನೆಗಳ ಕೊಟ್ಟಿಗೆಯಿಂದ ಗೋವುಗಳನ್ನು ಎಳೆದುಕೊಂಡ ಹೋದ ಒಂದೇ ಒಂದು ಉದಾಹರಣೆ ಇಲ್ಲ. ಅದಕ್ಕೆ ಮುಖ್ಯ ಕಾರಣ ಭರತ್ ಶೆಟ್ಟಿಯವರ ದಕ್ಷ ಆಡಳಿತ. ಅವರು ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಯಾವುದೇ ಹಸ್ತಕ್ಷೇಪ ಮಾಡದೇ ಪೊಲೀಸರು ತಮ್ಮ ಕರ್ತವ್ಯ ಸಲ್ಲಿಸುವಂತೆ ಮಾಡಿದ್ದಾರೆ. ಇನ್ನು ಹಿಂದುತ್ವದೊಂದಿಗೆ ಅಭಿವೃದ್ಧಿಯನ್ನು ಕೂಡ ಶಾಸಕ ಡಾ. ಭರತ್ ಶೆಟ್ಟಿ ವೈಯವರು ಜೊತೆಜೊತೆಯಾಗಿ ತೆಗೆದುಕೊಂಡಿದ್ದಾರೆ. ಅದಕ್ಕೆ ಕ್ಷೇತ್ರದಲ್ಲಿ ಆಗಿರುವ 2,250 ಕೋಟಿ ರೂ ಅಭಿವೃದ್ಧಿ ಯೋಜನೆಗಳೇ ಸಾಕ್ಷಿ. ಇಂತಹ ಶಾಸಕರನ್ನು ಜನ ಬಯಸುತ್ತಿದ್ದಾರೆ ಎಂದು ತಿಲಕರಾಜ್ ಕೃಷ್ಣಾಪುರ ಹೇಳಿದ್ದಾರೆ.