ನಾಳೆ ಪ್ರಿಯಾಂಕಾ ಗಾಂಧಿ ಮೂಲ್ಕಿಗೆ ಆಗಮನ
ಕಿನ್ನಿಗೋಳಿ: “ನಾಳೆ(ಮೇ 7) ಮಧ್ಯಾಹ್ನ ಕೊಲ್ನಾಡಿಗೆ ಪ್ರಿಯಾಂಕಾ ಗಾಂಧಿ ಬರುತ್ತಿದ್ದಾರೆ. ದಿ. ಇಂದಿರಾ ಗಾಂಧಿ ಅವರ ಪ್ರತಿರೂಪವೆಂದೇ ಹೇಳಲಾಗುವ ಪ್ರಿಯಾಂಕಾ ಗಾಂಧಿ ಅವರು ಮೊದಲ ಬಾರಿ ನಮ್ಮ ಜಿಲ್ಲೆಗೆ ಕಾಲಿಡುತ್ತಿದ್ದಾರೆ. ಕಾರ್ನಾಡು ಸದಾಶಿವರಾವ್ ಅವರ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸ್ಮರಿಸುತ್ತ ಅವರು ನಮ್ಮ ಊರನ್ನು ಆಯ್ಕೆ ಮಾಡಿದ್ದು ಕೊಲ್ನಾಡಿನಲ್ಲಿ ಕೃಷಿ ಮೇಳ ನಡೆದಿರುವ ಜಾಗದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಜರಿರಲಿದ್ದಾರೆ. ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು” ಎಂದು ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕರೆ ನೀಡಿದರು.
“ಮೂಲ್ಕಿ ಮೂಡಬಿದ್ರೆ ಭಾಗದ ಹಾಲಿ ಶಾಸಕರು ಚುನಾವಣೆಯ ಕಾವು ಏರುತ್ತಿದ್ದಂತೆ ಹತಾಶರಾಗಿ ಎಡಬಿಡಂಗಿಯ ಹಾಗೆ ಮಾತಾಡುತ್ತಿದ್ದಾರೆ. ಶಾಸಕರು ಮತ್ತವರ ಚೇಲಾಗಳು ವೈಯಕ್ತಿಕ ತೇಜೋವಧೆ ಮಾಡುವಷ್ಟರ ಮಟ್ಟಿಗೆ ಇಳಿದಿದ್ದಾರೆ. ನಾನು ಅದಕ್ಕೆಲ್ಲ ಹೆದರುವುದಿಲ್ಲ. ಯಾವುದೇ ತಪ್ಪು ಮಾಡದ ಕಾರಣ ಭಯಪಡುವ ಅಗತ್ಯವಿಲ್ಲ. ಉಮಾನಾಥ್ ಕೋಟ್ಯಾನ್ ಅವರು ತಪ್ಪು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಅದು ಪ್ರಸಾರವಾಗಬಾರದು ಎಂದು ಕೋರ್ಟ್ ನಲ್ಲಿ ಸ್ಟೇ ತಂದಿದ್ದು ಆವರೇ. ಅವರ ತೇಜೋವಧೆ ಮಾಡಲು ನನ್ನ ಬಳಿ ಸಾಕಷ್ಟು ದಾಖಲೆಯಿದೆ. ಆದರೆ ನಾನು ಮಾಡುವುದಿಲ್ಲ” ಎಂದರು.
“ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಜನರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ಕೆಐಎಡಿಬಿ ಭೂ ಸ್ವಾಧೀನ ಮಾಡಲು ಒತ್ತಾಯಿಸಿರುವ ಉಮಾನಾಥ್ ಕೋಟ್ಯಾನ್ ಐಕಳ, ಕವತ್ತಾರು, ಬಳ್ಕುಂಜೆ ಭಾಗದ ಜನರ ಕಣ್ಣಲ್ಲಿ ಕಳ್ಳರಂತೆ ಆಗಿದ್ದಾರೆ. ಇದು ಶಾಸಕರಿಗೆ ಶೋಭೆ ತರುವ ವಿಚಾರವಲ್ಲ. ಜನರಿಗೆ ಎಲ್ಲ ತಿಳಿದಿರುವಾಗ ಎಷ್ಟು ಸುಳ್ಳು ಹೇಳಿದರೂ ಅವರ ಆಟ ನಡೆಯುವುದಿಲ್ಲ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾರ್ಡ್, ಮೂಡಬಿದ್ರೆ ಬ್ಲಾಕ್ ಕಾರ್ಯದರ್ಶಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.