ಮೂಲ್ಕಿ: “ಕಳೆದ 5 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದೆ. ಇದಕ್ಕೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮವೇ ಕಾರಣ. ವಿವಿಧ ಇಲಾಖೆಗಳಿಂದ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶ್ರಮಿಸಿದ್ದೇನೆ. ಹೀಗಾಗಿ ಮತ ಯಾಚನೆಗೆ ಮನೆ ಮನೆಗೆ ಹೋದಾಗ ಬಹಳ ಒಳ್ಳೆಯ ಸ್ಪಂದನೆ ಜನರಿಂದ ಸಿಗುತ್ತಿದೆ. ಕಾರ್ಯಕರ್ತರು ತಲೆ ಎತ್ತಿ ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ಹಿರಿಯರಾದ ಗೋಪಾಲ ಶೆಟ್ಟಿ ಅವರ ಮಾರ್ಗದರ್ಶನ ನನಗೆ ತುಂಬಾ ಅಗತ್ಯವಿದೆ. ಅವರು ನಮ್ಮ ಜೊತೆ ಪ್ರಚಾರದಲ್ಲಿ ಕೈಜೋಡಿಸಲಿದ್ದಾರೆ. ಮೇ 3ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೂಲ್ಕಿಗೆ ಬರಲಿದ್ದಾರೆ. ಇಲ್ಲಿಯವರೆಗೆ ಮಂಗಳೂರು ಕೇಂದ್ರ ಸ್ಥಾನಕ್ಕೆ ನಮ್ಮ ಪ್ರಧಾನಿಯವರು ಬಂದಿದ್ದರು, ಆದರೆ ಈ ಭಾಗಕ್ಕೆ ಯಾರೂ ಬಂದಿರಲಿಲ್ಲ. ಇದು ನಮ್ಮೆಲ್ಲರಿಗೂ ಖುಷಿಯ ವಿಚಾರ” ಎಂದು ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಹೇಳಿದರು.
ಬಳಿಕ ಮಾತಾಡಿದ ಗೋಪಾಲ ಶೆಟ್ಟಿ ಅವರು, “ಉಮಾನಾಥ್ ಕೋಟ್ಯಾನ್ ಕಳೆದ ಅವಧಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದು ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ಕಳೆದ 9 ವರ್ಷಗಳಲ್ಲಿ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ದೇಶದಲ್ಲಿ ವಿದ್ಯುತ್, ಕುಡಿಯುವ ನೀರು ಸಮಸ್ಯೆ ಪರಿಹಾರ ಕಂಡಿದೆ. 3 ಕೋಟಿಗೂ ಹೆಚ್ಚು ಬಡವರಿಗೆ ಮನೆ ಕಟ್ಟಿ ಕೊಟ್ಟಿದ್ದಾರೆ. ನಿತಿನ್ ಗಡ್ಕರಿ ಅವರ ಸಾರಥ್ಯದಲ್ಲಿ ದೇಶದಲ್ಲಿ ರಸ್ತೆ ಅಭಿವೃದ್ಧಿಯಾಗಿದೆ. ಇದರಿಂದ ಲಕ್ಷಾಂತರ ಮಂದಿಗೆ ಉದ್ಯೋಗ ದೊರೆತಿದೆ. ಜಗತ್ತು ಇಂದು ಮೋದಿಯವರನ್ನು ಕೊಂಡಾಡುತ್ತಿದೆ. 2014ರಲ್ಲಿ ದೇಶಕ್ಕೆ ಪಾಕಿಸ್ತಾನದ ಕಾಟ ವಿಪರೀತವಾಗಿತ್ತು. ಆದರೆ ಈಗ ಪಾಕಿಸ್ತಾನದ ಆಟ ಸಂಪೂರ್ಣ ನಿಂತಿದೆ. ಇದೆಲ್ಲ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತದಲ್ಲಿ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ದೇಶ, ರಾಜ್ಯ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ್ರ ಉತ್ತರ ಕ್ಷೇತ್ರದ ಸಂಸತ್ ಸದಸ್ಯ ಗೋಪಾಲ್ ಶೆಟ್ಟಿ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಹರೀಶ್ ಶೆಟ್ಟಿ ಎರ್ಮಾಳ್, ಭುವನಾಭಿರಾಮ ಉಡುಪ, ಸುಭಾಷ್ ಶೆಟ್ಟಿ, ಕೇಶವ ಕರ್ಕೇರ, ಸತೀಶ್ ಅಂಚನ್, ರಂಗನಾಥ್ ಶೆಟ್ಟಿ, ದಿವಾಕರ್ ಸಾಮಾನಿ, ವಿನೋದ್ ಸಾಲಿಯಾನ್ ಬೆಳ್ಳಾಯರು, ವಿನೋದ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.