ಸುರತ್ಕಲ್: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ಅನ್ನಛತ್ರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಮಧ್ಯಾಹ್ನ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು, “ಕಾವೂರು ದೇವಸ್ಥಾನದಲ್ಲಿ ಸುಸಜ್ಜಿತ ಅನ್ನ ಛತ್ರ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈಗ ಆ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ಇದಕ್ಕೆ ಊರ ಪರವೂರಿನ ಭಕ್ತರು ತುಂಬು ಹೃದಯದಿಂದ ಸಹಾಯ ನೀಡಬೇಕಾಗಿದೆ. ಮಹಾಲಿಂಗೇಶ್ವರ ದೇವರು ನಮ್ಮ ಕೈಯಿಂದ ಮಾಡಿಸುತ್ತಾರೆ, ನಾವೇನಿದ್ದರೂ ನಿಮಿತ್ತ ಮಾತ್ರ. ದಾನಿಗಳ ನೆರವಿನಿಂದ ಆದಷ್ಟು ಶೀಘ್ರದಲ್ಲಿ ಅನ್ನ ಛತ್ರ ನಿರ್ಮಾಣವಾಗಲಿ” ಎಂದರು.
ವೇದಿಕೆಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಗುತ್ತಿಗೆದಾರ ಸುಧಾಕರ್ ಶೆಟ್ಟಿ ಮುಗ್ರೋಡಿ, ಕಾರ್ಪೋರೇಟರ್ ಸುಮಂಗಲ ರಾವ್, ಶರತ್ ಕುಮಾರ್, ರಂಜಿನಿ ಕೋಟ್ಯಾನ್, ಲೋಹಿತ್ ಅಮೀನ್, ದೀಪಕ್ ಪೂಜಾರಿ, ಕಾವೂರು ದೇವಳದ ಅರ್ಚಕ ಶ್ರೀನಿವಾಸ ಭಟ್, ಮೋಹನ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.