ಸುರತ್ಕಲ್: “ಸರ್ಕಾರದ ಸಾಧನೆ ಬಿಂಬಿಸಲು ಹಾಗೂ ಜನಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಮತ್ತು ಯೋಜನೆಗಳ ಮಾಹಿತಿ ನೀಡಲು ಇದೇ ಬರುವ ಜ.21ರಿಂದ “ವಿಜಯ ಸಂಕಲ್ಪ ಅಭಿಯಾನ” ಆಯೋಜಿಸಲಾಗಿದ್ದು ಅಂದು ಬೆಳಗ್ಗೆ 9 ಗಂಟೆಗೆ ಸುರತ್ಕಲ್ ನಗರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಅಭಿಯಾನದ ಅಂಗವಾಗಿ ಗೋಡೆ ಪೇಂಟಿಂಗ್‌ಗಳನ್ನು ಮಾಡಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು. ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್ ಲೈನ್ ಇರಲಿದ್ದು (ಮಿಸ್ ಕಾಲ್), ನೋಂದಣಿ ಪ್ರಕ್ರಿಯೆಯ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಈ ತಿಂಗಳ ಜನವರಿ 29ರಂದು ಮಾನ್ಯ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮ
ಕರ್ನಾಟಕದ ಪಾಲಿಗೆ ಮತ್ತಷ್ಟು ವಿಶೇಷವಾಗಿರಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಒಟ್ಟಿಗೇ ಕೂತು ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮ ಒಟ್ಟಿಗೆ ಆಲಿಸಲಿದ್ದಾರೆ. ನಮ್ಮ ಮಂಡಲದಲ್ಲಿ ಎಲ್ಲಾ ಬೂತ್‌ಗಳಲ್ಲಿ ಕಾರ್ಯಕರ್ತರು ಮತ್ತು ಪ್ರಮುಖರು ಮನ್ ಕೀ ಬಾತ್ ಆಲಿಸಲಿದ್ದಾರೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಅಭಿಯಾನವು ಕಾರ್ಯಕರ್ತರೆಲ್ಲರ
ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿದೆ” ಎಂದರು.
“ಈ ಕಾರ್ಯಕ್ರಮವು ಪಕ್ಷವನ್ನು ಗೆಲುವಿನ ಹಾದಿಗೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಲಿದೆ. ನಮ್ಮ ಮಂಡಲದ ಎಲ್ಲಾ ಮತದಾರರನ್ನು ವಿಜಯ ಸಂಕಲ್ಪ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರು ತಲುಪುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ, ಮಾನ್ಯ ಶಾಸಕರ ಸಾಧನೆಗಳ ಕುರಿತು ಕರಪತ್ರವನ್ನು ಮತದಾರರ ಮನೆಗೆ ತೆರಳಿ ಹಂಚಿಕೆ ಮಾಡಲಾಗುವುದು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳ
ಫಲಾನುಭವಿಗಳನ್ನು ಸಂಪರ್ಕಿಸಲಿದ್ದೇವೆ. ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆದುದನ್ನು ತಿಳಿಸಲಿದ್ದೇವೆ. ಮನೆ ಹಾಗೂ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸುವ ಕೆಲಸವೂ ನಡೆಯಲಿದೆ. ಜನವರಿ 21ರಿಂದ ಅಭಿಯಾನ ಆರಂಭವಾಗಲಿದ್ದು, ಅದಕ್ಕಾಗಿ ಈಗಾಗಲೇ ವ್ಯವಸಿತ
ಪೂರ್ವಭಾವಿ ಸಿದ್ಧತೆ ನಡೆದಿದೆ. ಮಂಡಲಗಳಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಭಾರತೀಯ ಜನತಾ ಪಾರ್ಟಿ ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆಯುವ ಗುರಿ ಹಾಕಿಕೊಂಡಿದೆ. ಅದಕ್ಕಾಗಿ ಪಕ್ಷವು ತಳಹಂತದಿಂದ ಪಕ್ಷದ ಸಶಕ್ತಿಕರಣ ಸೇರಿ ವಿವಿಧ
ಕಾರ್ಯತಂತ್ರಗಳನ್ನು ಮಾಡುತ್ತಿದೆ. ಮನೆಮನೆಗೆ ಕರಪತ್ರ ಹಂಚುವುದರ ಜೊತೆಗೆ ಬಿಜೆಪಿ ಸಾಧನೆ ಬಿಂಬಿಸುವ ಪೇಂಟಿಂಗ್ ಹಾಗೂ ಸದಸ್ಯತ್ವ ಅಭಿಯಾನ ಇವುಗಳು ಈ ಅಭಿಯಾನದ ಭಾಗವಾಗಿದೆ. ಮಂಡಲದಲ್ಲಿ ಶಾಸಕರು ಹಾಗು ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ತಮ್ಮ ಸಾಧನೆ ಒಳಗೊಂಡ ಕರಪತ್ರಗಳನ್ನು ಮನೆಗಳಿಗೆ ಹಂಚುವ ಗುರಿ
ಹಾಕಿಕೊಂಡಿದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಅಭಿಮಾನಿಗಳು ತಮ್ಮ ಮನೆ, ದ್ವಿಚಕ್ರ ವಾಹನ
ಹಾಗೂ ಕಾರುಗಳಿಗೆ ಅಂಟಿಸಿಕೊಳ್ಳಲು ಮೂರು ನಮೂನೆಯ ಸ್ಟಿಕರ್‌ಗಳನ್ನು ವಿತರಿಸಲಾಗುವುದು” ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ ಸಂಕಲ್ಪ ಅಭಿಯಾನದ ಸಂಚಾಲಕ ಸಂದೀಪ್ ಬೋಂದೆಲ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ರಕ್ಷಿತ್ ಪೂಜಾರಿ, ಸುಚೇತನ್ ಪೂಜಾರಿ, ಸಂದೀಪ್ ಪಚ್ಚನಾಡಿ, ಅಮೃತ್ ಲಾಲ್, ಜಾಯ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.