ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಪದವು ವಾರ್ಡ್ ನಂ. 22ರಲ್ಲಿ 1 ಕೋಟಿ 11 ಲಕ್ಷ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಗುರುವಾರ ಚಾಲನೆ ನೀಡಿದರು. ಮಂಗಳೂರು ಮೇಯರ್ ಜಯಾನಂದ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
20 ವರ್ಷಗಳಿಂದ ಮೂಲಸೌಕರ್ಯ ವಂಚಿತ ಪ್ರದೇಶವಾದ ವ್ಯಾಸನಗರ ಅಜ್ಜಕಾನ್ ಕಟ್ಟೆಯಿಂದ ಅರಸು ಜಾರಂದಾಯ ಕೂಡುರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿರುವುದು ಜನರ ಸಂತಸಕ್ಕೆ ಕಾರಣವಾಗಿದೆ. ರಸ್ತೆ, ಕುಡಿಯುವ ನೀರು, ಚರಂಡಿ ಮೂಲಸೌಕರ್ಯಗಳಿಂದ ವಂಚಿತರಾಗಿದ್ದ ಈ ಭಾಗದ ಜನರು ಕಳೆದ 21 ವರ್ಷಗಳಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳ ಗಮನ ಸೆಳೆಯುತ್ತಲೇ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮೇಯರ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಿಗೆ ಜನರು ಕೃತಜ್ಞತೆ ಸಲ್ಲಿಸಿದರು.