ಸುರತ್ಕಲ್: ಚಿಟ್ ಫಂಡ್ ಹೆಸರಲ್ಲಿ ದಂಪತಿಯಿಂದ ಕೋಟ್ಯಂತರ ರೂ. ಪಂಗನಾಮ, ಆರೋಪಿಗಳ ಸೆರೆ

ಸುರತ್ಕಲ್: ಇಲ್ಲಿನ “ಭಾರ್ಗವಿ ಫೈನಾನ್ಸ್” ಮಾಲಕ ಮತ್ತಾತನ ಪತ್ನಿ ಪರಿಸರದ ಜನರಿಗೆ ಕೋಟ್ಯಂತರ ರೂಪಾಯಿಗೂ ಅಧಿಕ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದ್ದು ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸುರತ್ಕಲ್ ನಿವಾಸಿ ದೀಪಕ್ ಶೆಟ್ಟಿ ಎಂಬವರು ದೂರು ನೀಡಿದ್ದು, ಸುರತ್ಕಲ್ ನಲ್ಲಿ ಭಾರ್ಗವಿ ಫೈನಾನ್ಸ್ ಹೊಂದಿದ್ದ ಅಶೋಕ್ ಭಟ್, ಪತ್ನಿ ವಿದ್ಯಾವತಿ ಭಟ್, ಮಗಳು ಪ್ರಿಯಾಂಕಾ ಭಟ್ ಪ್ರಕರಣದ ಆರೋಪಿಗಳು. ಇವರ ವಿರುದ್ಧ ಸೆನ್ ಅಪರಾಧ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.


ಭಾರ್ಗವಿ ಫೈನಾನ್ಸ್ ನಲ್ಲಿ ಮೊದಮೊದಲು 50 ಸಾವಿರ ರೂ. ಚಿಟ್ ಫಂಡ್ ಇಡುತ್ತಿದ್ದು ನಂತರ ಲಕ್ಷ ಹಣವನ್ನು ಫಂಡ್ ಹೆಸರಲ್ಲಿ ಸಂಗ್ರಹಿಸಲಾಗುತ್ತಿತ್ತು. ಇದು ಮುಂದುವರಿದು 20 ಲಕ್ಷ, 30 ಲಕ್ಷದವರೆಗೆ ಫಂಡ್ ಇಡುತ್ತಿದ್ದು ಇದಕ್ಕಾಗಿ ಪರಿಸರದ ಹೋಟೆಲ್, ಅಂಗಡಿ ಮಾಲಕರು, ಉದ್ಯಮಿಗಳು, ವ್ಯಾಪಾರಿಗಳು ತಾವು ದುಡಿದ ಲಕ್ಷಾಂತರ ರೂ. ಹಣವನ್ನು ಕಟ್ಟುತ್ತಾ ಬಂದಿದ್ದರು. ಪ್ರತೀ ಬಾರಿಯೂ ಫಂಡ್ ಹಣವನ್ನು ಕೊನೆಗೆ ತೆಗೆಯಿರಿ ಎನ್ನುತ್ತಿದ್ದ ಆರೋಪಿಗಳು ಹಣವನ್ನು ಚೆಕ್ ಮುಖಾಂತರ ಸ್ವೀಕರಿಸದೆ ನಗದು ಮೂಲಕವೇ ಸ್ವೀಕರಿಸುತ್ತ ಬಂದಿದ್ದು ವಂಚನೆಗೆ ಮೊದಲೇ ನಿರ್ಧರಿಸಿದ್ದರು ಎಂದು ಸಂತ್ರಸ್ತರು ದೂರಿದ್ದಾರೆ.
ಅಶೋಕ್ ಭಟ್ ಎಂಟು ತಿಂಗಳ ಹಿಂದೆ ಸುರತ್ಕಲ್ ನಲ್ಲಿನ ಫೈನಾನ್ಸ್ ಮುಚ್ಚಿದ್ದು ಕಟೀಲು ಬಳಿ ಹೊಸದಾಗಿ ಫೈನಾನ್ಸ್ ತೆರೆದಿದ್ದಾನೆ. ಕಟೀಲು, ಕಿನ್ನಿಗೋಳಿ ಭಾಗದಲ್ಲೂ ಇದೇ ರೀತಿ ಹಲವರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗುತ್ತಿದ್ದು ಈ ಕುರಿತು ಇನ್ನಷ್ಟೇ ದೂರು ದಾಖಲಾಗಬೇಕಿದೆ. ಅಶೋಕ್ ಭಟ್ ಸುರತ್ಕಲ್ ಭಾಗದಲ್ಲಿ ನೂರಾರು ಮಂದಿಗೆ 2500 ರೂ. ನಿಂದ ಹಿಡಿದು 70 ಲಕ್ಷದವರೆಗೆ ಪಂಗನಾಮ ಹಾಕಿದ್ದಾನೆ. ಪ್ರತೀ ಬಾರಿ ಯಾವುದೇ ದಾಖಲೆ ಉಳಿಯದಂತೆ ಎಚ್ಚರಿಕೆ ವಹಿಸಿದ್ದು ಪತ್ನಿ, ಮಗಳನ್ನು ಮುಂದಿಟ್ಟು ಗೋಲ್ ಮಾಲ್ ನಡೆಸುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ. ಫಂಡ್ ಅವಧಿ ಮುಗಿಯುತ್ತ ಬಂದರೂ ಹಣ ಕೊಡದಿರುವುದನ್ನು ಪ್ರಶ್ನಿಸಿದಾಗ ಫೈನಾನ್ಸ್ ಹಣ ಕಲೆಕ್ಷನ್ ಮಾಡುತ್ತಿದ್ದ ಶಿಬರೂರು ನಿವಾಸಿ ಯಕ್ಷತ್ ಎಂಬಾತನ ಹೆಸರನ್ನು ಹೇಳುತ್ತಾ ಆತ ಹಣ ಕೊಡದೆ ವಂಚಿಸಿದ್ದಾಗಿ ಸುಳ್ಳು ಹೇಳುತ್ತಿದ್ದ. ಹೀಗೆ ವರ್ಷಗಳ ಕಾಲ ಯಾಮಾರಿಸುತ್ತ ಬಂದಿದ್ದು ಅಂತಿಮವಾಗಿ ಹಣ ಕಟ್ಟಿದವರು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


ಅಶೋಕ್ ಭಟ್ ಹಿಂದೆ ಬಿಜೆಪಿ, ಬಜರಂಗದಳ, ಹಿಂಜಾವೇ ಮತ್ತಿತರ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು 20ಕ್ಕೂ ಹೆಚ್ಚು ಕೋಮು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗೂಂಡಾ ಎಂದು ಹಣೆಪಟ್ಟಿ ಕಟ್ಟಿಕೊಂಡು ಗಡಿಪಾರು ಆಗಿದ್ದ.

ಅಶೋಕ್ ಭಟ್ ಸುರತ್ಕಲ್ ಫೈನಾನ್ಸ್ ಮೂಲಕವೇ 15 ಕೋಟಿಗೂ ಅಧಿಕ ವಂಚನೆ ಎಸಗಿದ್ದಾನೆ. ಮೈಸೂರು, ಕಟೀಲಿನಲ್ಲೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸಿದಲ್ಲಿ ರಾಜ್ಯದಲ್ಲೇ ಅತೀ ದೊಡ್ಡ ವಂಚನೆ ಪ್ರಕರಣ ಇದಾಗಲಿದೆ ಎಂದು ಸಂತ್ರಸ್ತರ ಪರವಾಗಿ ಅಜಿತ್ ಕುಮಾರ್ ಹೇಳಿದ್ದಾರೆ. ಆರೋಪಿಗಳು ನೂರಾರು ಕೋಟಿ ರೂಪಾಯಿ ವಂಚನೆ ನಡೆಸಿರುವ ಸಾಧ್ಯತೆಯಿದ್ದು ಈ ಕುರಿತು ಜಿಲ್ಲಾಧಿಕಾರಿ ಅವರಿಗೂ ದೂರು ನೀಡಲಿದ್ದೇವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಉದಯ ಆಳ್ವ, ದೀಪಕ್ ಶೆಟ್ಟಿ, ಸದಾನಂದ ಶೇರಿಗಾರ್, ಕೈಲಾಸ್ ತಡಂಬೈಲ್ ಉಪಸ್ಥಿತರಿದ್ದರು.

error: Content is protected !!