
“ಬನ” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಮಂಗಳೂರು: ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ “ಬನ” ತುಳುಚಲನ ಚಿತ್ರ ಅಕ್ಟೋಬರ್ 23 ರಂದು ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.
ಸಿನಿಮಾವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು, “ಬನ ಸಿನಿಮಾ ತುಳುನಾಡಿಗೆ ಕೀರ್ತಿ ತರುವ ಕೆಲಸ ಮಾಡಲಿ. ನಟನೆ ಮಾಡಿದ ಎಲ್ಲರಿಗೂ ಯಶಸ್ಸು ಸಿಗಲಿ. ಈ ಸಿನಿಮಾ ಎಲ್ಲ ತುಳುವರು ಕುಟುಂಬ ಸಮೇತರಾಗಿ ನೋಡಬೇಕು” ಎಂದರು.
ಬಳಿಕ ಮಾತಾಡಿದ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ಅವರು, “ತುಳುನಾಡಿಗೆ ತುಂಬಾ ಕನೆಕ್ಟ್ ಆಗಿರುವಂತ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತಾಡಿ, “ತುಳುನಾಡಿನ ಕಥೆಯನ್ನು ಆಧರಿಸಿದ ಸಿನಿಮಾ ಬನ ಈಗಾಗಲೇ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ತುಳುನಾಡಿನ ಎಲ್ಲರೂ ಸಿನಿಮಾ ಥಿಯೇಟರ್ ಗೆ ಬಂದು ಸಿನಿಮಾ ನೋಡಿ” ಎಂದರು.
ರಾಜ್ಯ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತಾಡಿ, “ನಾಗಬನಕ್ಕೂ ತುಳುನಾಡಿಗೂ ಅವಿನಾಭಾವ ಸಂಬಂಧವಿದೆ. ನಾಗಾರಾಧನೆಯ ಮಹತ್ವವನ್ನು ತಿಳಿಸುವ ಸಿನಿಮಾ ಕಮರ್ಷಿಯಲ್ ಇದಾಗಿದ್ದು ತುಳುವರು ಸಿನಿಮಾ ನೋಡುವ ಮೂಲಕ ನಿರ್ಮಾಪಕರನ್ನು ಗೆಲ್ಲಿಸಬೇಕು” ಎಂದರು.
ನಟ ಸಾಯಿಕೃಷ್ಣ ಕುಡ್ಲ ಮಾತಾಡಿ, “ನಿತಿನ್ ರೈ ಅವರು ಮೂರನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ಪ್ರತಿಭೆಗೆ ಇಡೀ ತುಳುನಾಡು ಸಿನಿಮಾ ನೋಡುವ ಮೂಲಕ ಗೌರವ ಕೊಡಬೇಕಿದೆ” ಎಂದರು. ಯಥಾಥ್೯ ಸೋಶಿಯಲ್ ಮಂಗಳೂರು ಇದರ ಅಧ್ಯಕ್ಷರಾದ ಈಶ್ವರ್ ಪ್ರಸಾದ್ ಶೆಟ್ಟಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
“ಬನ” ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲ್ಲಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭುನಯಿಸಿದ್ದಾರೆ.
ನಾಯಕನಾಗಿ ನಿಹಾಲ್ ರೈ, ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಶರತ್ ಆಳ್ವ, ಪ್ರೀಯ ಶೆಟ್ಟಿ, ವಿಜಯಹರಿ ರೈ, ಭವ್ಯಶ್ರಿ ಪೂಜಾರಿ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್ , ಧನ್ಯ ಪೂಜಾರಿ, ಪ್ರವೀಣ್ ಕೊಡಕ್ಕಲ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದು ನವೀನ್ ನೇರಳ್ತೊಡಿ ಅವರ ಸಂಕಲನ ಚಿತ್ರಕ್ಕಿದೆ. ಜಯಕಾರ್ತಿ ಅವರು ಸಂಗೀತ ನೀಡಿದ್ದಾರೆ.
ಉತ್ತಮ ಕಥೆಚಿತ್ರಕಥೆಯನ್ನು ಒಳಗೊಂಡ ಬನ ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶದ ಜೊತೆಗೆ ಹಾಸ್ಯ, ಪ್ರೀತಿ, ಸಿಡುಕು, ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದೇವೆ ಎಂದು ಸಿನಿಮಾದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ತಿಳಿಸಿದರು.
ವೇದಿಕೆಯಲ್ಲಿ ನಿರ್ಮಾಪಕ ಮನೋಹರ ರೈ ವೈಪಾಲ, ಇಸ್ಮಾಯಿಲ್ ಮೂಡುಶೆಡ್ಡೆ, ವಿನೀತ್ ಕುಮಾರ್, ಸಮತಾ ಅಮೀನ್, ಪುರುಷೋತ್ತಮ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಉಪ್ಪಳ, ಬಾಳ ಜಗನ್ನಾಥ ಶೆಟ್ಟಿ, ಕುದ್ರೋಳಿ ಗಣೇಶ್, ನವೀನ್ ಶೆಟ್ಟಿ ಅಳಕೆ, ರಮೇಶ್ ರೈ ಕುಕ್ಕುವಳ್ಳಿ, ಸುಬ್ರಹ್ಮಣ್ಯ ಭಟ್, ರೂಪ ವರ್ಕಾಡಿ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರ್ವಹಿಸಿದರು.
ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್. ರೋಮ್ಯಾನ್ಸ್!
“ಬನ” ಸಿನಿಮಾ ಎಲ್ಲರಲ್ಲೂ ಹೊಸ ಕುತೂಹಲ, ನಿರೀಕ್ಷೆ ಮೂಡಿಸುತ್ತಿದೆ. ಕಾಡಿನಲ್ಲಿ ಕಂಡುಬಂದ ಮಗುವಿನ ಜತೆಗಿದ್ದವರು ಯಾರು, ಮನೆ ಮುಂದೆ ಹಾವು ಯಾಕೆ ಪ್ರತ್ಯಕ್ಷವಾಯಿತು, ಬನಕ್ಕೆ ಹಾನಿ ಮಾಡಿದವರನ್ನು ಕಾಡಲು ಬಂತೇ ನಾಗರಾಜ ಮುಂತಾದ ಹಲವಾರು ಪ್ರಶ್ನೆಗಳೊಂದಿಗೆ, ಈ ಸಿನಿಮಾದಲ್ಲಿ ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್. ರೋಮ್ಯಾನ್ಸ್ ಎಲ್ಲವೂ ಇರುವುದು ಖಚಿತವಾಗಿದೆ. ದೃಶ್ಯ ದೃಶ್ಯಗಳಲ್ಲೂ ಕೌತುಕಗಳು ಇರುವ ನಿರೀಕ್ಷೆಯನ್ನು ಈ ಟ್ರೇಲರ್ ಹುಟ್ಟುಹಾಕಿದೆ. ಜತೆಗೆ ನಮ್ಮ ಮಣ್ಣ್ದ ಕಥೆ ಎಂಬ ಟ್ಯಾಗ್ಲೈನ್, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸಲಿರುವುದನ್ನು “ಬನ” ಸಿನಿಮಾ ಸ್ಪಷ್ಪಪಡಿಸುತ್ತದೆ ಎಂದವರು ತಿಳಿಸಿದರು.
“ಬನ” ತುಳುನಾಡಿನ ನಂಬಿಕೆ ಪ್ರಕೃತಿ:
ಬನ… ಇದು ತುಳುನಾಡಿನ ನಂಬಿಕೆ, ಪ್ರಕೃತಿ, ಸಂಸ್ಕೃತಿಯನ್ನು ಬಿಂಬಿಸುವ ಒಂದು ಸಸ್ಪೆನ್ ಕಥೆಯುಳ್ಳ ಸಿನಿಮಾ. ಈಗಾಗಲೇ ಎರಡು ಸಿನಿಮಾಗಳನ್ನು ನೀಡಿರುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರ ನಿರ್ದೇಶನದ ಬನ ಸಿನಿಮಾವು ಹಲವಾರು ಕಾರಣಗಳಿಂದ ಎಲ್ಲರಲ್ಲೂ ಭಾರೀ ಕುತೂಹಲ ಹಾಗೂ ನಿರೀಕ್ಷೆಗಳನ್ನು ಮೂಡಿಸುತ್ತಿದೆ.
ಈ ಸಿನಿಮಾದ ಟ್ರೇಲರ್ನಲ್ಲಿ ಕಾಣುವ ಕಾಡು, ಅದರ ನಿಗೂಢತೆ, ಮಗು… ಹೀಗೆ ಸಾಕಷ್ಟು ಸಸ್ಪೆನ್ಸ್ಗಳಿಗೆ ಕಾರಣವಾಗುತ್ತಿದೆ. ಹಿನ್ನೆಲೆ ಸಂಗೀತವಂತೂ ತುಂಬಾ ಖುಷಿಕೊಡುತ್ತಿದೆ.

ನಾಗಬನ ಎಂದರೆ ಭಯಭಕ್ತಿ:
ಒಂದೇ ರೀತಿಯ ಸಿನಿಮಾ ನೋಡಿ ಬೇಸರ ಮಾಡಿಕೊಂಡಿರುವ ಪ್ರೇಕ್ಷಕರಿಗೆ ನಿರ್ದೇಶಕರು ಹೊಸ ರೀತಿಯ ಸಿನಿಮಾ ನೀಡುತ್ತಿದ್ದಾರೆ. ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ಈ ಹಿಂದೆ ಧರ್ಮಚಾವಡಿ, ಧರ್ಮದೈವ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಬಾರಿ ಅದಕ್ಕಿಂತಲೂ ವಿಶೇಷತೆಯ ನಾಗಬನದ ಸಿನಿಮಾ ನೀಡುತ್ತಿರುವುದು ಗಮನಾರ್ಹ ಸಂಗತಿ. ನಾಗಬನ ಎಂದು ಹೇಳಿದ ಕೂಡಲೇ ನಮಗೆ ಭಯಭಕ್ತಿ ಎಲ್ಲವೂ ಬರುತ್ತದೆ. ಅಂಥ ನಾಗಬನಕ್ಕೆ ಸಂಬಂಧಿಸಿ ಒಂದು ಸುಂದರ ಕಥೆಯನ್ನು ಸಿದ್ಧಪಡಿಸಿ, ಒಂದು ವರ್ಷದ ಸಿದ್ಧತೆಯೊಂದಿಗೆ ಮೂಡಿ ಬರುತ್ತಿರುವ ಈ ಸಿನಿಮಾವು ಎಲ್ಲರ ಮನಗೆಲ್ಲುವ ನಿರೀಕ್ಷೆ ಇದ್ದೇ ಇದೆ ಎಂದು ನಿರ್ಮಾಪಕ ಮನೋಹರ ರೈ ವೈಪಾಲ ತಿಳಿಸಿದ್ದಾರೆ.
