
ಮಂಗಳೂರು: “ಜಿಲ್ಲೆಯನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಚಿವರಾದ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಮೊನ್ನೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಉದ್ಯಮಿಗಳ ಜೊತೆಗೆ ಸಭೆ ನಡೆಸಲಾಗಿದೆ. ನೈಟ್ ಲೈಫ್ ಆರಂಭಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.

ಸದ್ಯಕ್ಕೆ ಜಿಲ್ಲೆ ಶಾಂತಿಯುತವಾಗಿದೆ. ಗಲಭೆ ಎಬ್ಬಿಸುವವರು ಮತ್ತು ಗಲಭೆಯನ್ನು ಪ್ರೋತ್ಸಾಹಿಸುವವರು ಇಬ್ಬರಿಗೂ ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವಾಗಿದೆ. ಹೀಗಾಗಿ ಕಳೆದೆರಡು ವರ್ಷಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ“ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

”ಭ್ರಷ್ಟಾಚಾರ ಅನ್ನುವುದು ಬಿಜೆಪಿಯಲ್ಲಿ ತಾಂಡವವಾಡುತ್ತಿದೆ. ಇದಕ್ಕೆ ಉದಾಹರಣೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಕುಮಾರ್ ಬಿಸ್ವ ಹಾಗೂ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಸುವೆಂದು ಅಧಿಕಾರಿ. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆಂದು ಅವರ ಮೇಲೆ ಐಟಿ, ಇಡಿ ಛೂ ಬಿಟ್ರು. ನಂತರ ಅವರು ಗೃಹಸಚಿವ ಅಮಿತ್ ಶಾರನ್ನು ಭೇಟಿಯಾಗಿ ಬಿಜೆಪಿ ಸೇರಿದ್ರು. ಬಿಜೆಪಿಯ ವಾಷಿಂಗ್ ಮೆಷಿನ್ ನಲ್ಲಿ ಹಾಕಿದ್ದೇ ತಡ ಇಬ್ಬರೂ ಶುಭ್ರರಾಗಿ ಹೊರಬಂದ್ರು. ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಇದು ಬಿಜೆಪಿಯ ಭ್ರಷ್ಟಾಚಾರಕ್ಕೆ ತಾಜಾ ಉದಾಹರಣೆ. ಅದೇ ರೀತಿ ಡಿಕೆ ಶಿವಕುಮಾರ್ ಅವರನ್ನು ರೈಡ್ ಮಾಡಿ ಜೈಲಿಗೆ ಹಾಕಿದ್ರು. ಅವರು ಎದೆಗುಂದಲಿಲ್ಲ. ಜೈಲಿಂದ ಹೊರಬಂದ್ರು. ಇಂತಹ ಅನೇಕ ಉದಾಹರಣೆಗಳು ದೇಶದ ಉದ್ದಗಲಕ್ಕೂ ನಡೆದಿದೆ ಮತ್ತು ನಡೆಯುತ್ತಿದೆ.

ಅಧಿಕಾರಕ್ಕಾಗಿ ಕೇಂದ್ರದ ಬಿಜೆಪಿ ಸರಕಾರ ಯಾವ ಮಟ್ಟಕ್ಕೂ ಇಳಿಯಬಲ್ಲದು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದುದು“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶುಭೋದಯ ಆಳ್ವ, ಅಪ್ಪಿ, ಸುಹಾನ್ ಆಳ್ವ ಸಾರಿಕಾ, ನವಾಜ್, ನೀತು ಡಿಸೋಜ, ಸದಾಶಿವ ಉಳ್ಳಾಲ, ಮನೋರಾಜ್ ರಾಜೀವ, ವಿಕೆ ಮೋನು ಮತ್ತಿತರರು ಉಪಸ್ಥಿತರಿದ್ದರು.
