“ಕೆಡಿಪಿ ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಆಹ್ವಾನ ನೀಡದಿರುವುದು ಯಾಕೆ?“

ಮಂಗಳೂರು: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (KDP) ಸಭೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ಹಲವು ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದ್ದೆವು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, KDP ಸಭೆಗೆ ಅಧ್ಯಕ್ಷರನ್ನು ಆಹ್ವಾನಿಸುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಆದರೆ ಸೆ.15ರಂದು ನಡೆದ KDP ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದಿರುವುದರಿಂದ ಬಜಪೆಯ ಜನರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ನೇರವಾಗಿ ಮಂಡಿಸುವ ಅವಕಾಶ ತಪ್ಪಿದೆ. ಇದು ವೈಯಕ್ತಿಕ ಅಸಮಾಧಾನದ ವಿಚಾರವಲ್ಲ; ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯ ವಿಚಾರವಾಗಿದೆ ಎಂದು ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೊಕೇಶ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.


ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು PWD ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರಿಂದ ಪ್ರತಿದಿನ ದೂರುಗಳು ಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ರಸ್ತೆಗಳನ್ನು ಪರಿಶೀಲಿಸಿ ತ್ವರಿತ ದುರಸ್ತಿ ಹಾಗೂ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲು ಉದ್ದೇಶಿಸಲಾಗಿತ್ತು.
ಮಂಗಳೂರು ವಿಶೇಷ ಆರ್ಥಿಕ ‌ ವಲಯ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ ‌ ನಿರ್ವಸಿತ ಕುಟುಂಬಗಳ ಅರ್ಹ ಸದಸ್ಯರಿಗೆ ಕರ್ನಾಟಕ ಸರ್ಕಾರದ R&R ನೀತಿ/ಸಂಬಂಧಿತ ಸರ್ಕಾರಿ ಆದೇಶಗಳನ್ವಯ ದೊರಕಬೇಕಾದ ಉದ್ಯೋಗದ ಕುರಿತು ಹಲವು ವರ್ಷಗಳಿಂದ ಸಮಸ್ಯೆ ಮುಂದುವರಿದಿದೆ. GMPL ಸಂಸ್ಥೆಯು ಅರ್ಹ ನಿರ್ವಸಿತ ಕುಟುಂಬಗಳಿಗೆ ಕಾಯಂ ಉದ್ಯೋಗ ನೀಡುವ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿದೆ ಎಂಬ ದೂರುಗಳು ನಮ್ಮ ಗಮನಕ್ಕೆ ಬಂದಿವೆ. ಈ ಬಗ್ಗೆ ಸರ್ಕಾರದ ನಿಲುವೇನು ಮತ್ತು ಅರ್ಹ ಕುಟುಂಬಗಳಿಗೆ ನ್ಯಾಯ ದೊರಕಿಸಲು ಸರ್ಕಾರ ಕೈಗೊಳ್ಳುವ ಕ್ರಮವೇನು ಎಂಬುದನ್ನು KDP ಸಭೆಯಲ್ಲಿ ಪ್ರಸ್ತಾಪಿಸಲು ಉದ್ದೇಶಿಸಲಾಗಿತ್ತು.


ಬಜಪೆ ಪಟ್ಟಣ ಪಂಚಾಯತ್‌ಗೆ MSEZ ವ್ಯಾಪ್ತಿಯಿಂದ ಹಿಂದಿನ ವರ್ಷಗಳ ಅಂದಾಜು ₹8 ಕೋಟಿ ತೆರಿಗೆ ಬಾಕಿ ಉಳಿದಿದೆ. ಪ್ರಸ್ತುತ ವರ್ಷಗಳ ತೆರಿಗೆ ಪಾವತಿಯಾಗುತ್ತಿರುವುದಾದರೂ, ಹಿಂದಿನ ಬಾಕಿ ಮೊತ್ತದ ವಸೂಲಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಈ ಬಾಕಿ ತೆರಿಗೆ ವಸೂಲಿಯಾದರೆ ಪಟ್ಟಣ ಪಂಚಾಯತ್‌ನ ಸ್ವಂತ ಆದಾಯ ಹೆಚ್ಚಾಗಿ ರಸ್ತೆ, ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಜನರ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಹಣ ವಿನಿಯೋಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಬಾಕಿ ತೆರಿಗೆ ವಸೂಲಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಉದ್ದೇಶಿಸಲಾಗಿತ್ತು.
MRPLಗೆ ಸಂಬಂಧಿಸಿದ ಸುಮಾರು 27 ಎಕರೆ ಭೂಮಿಯನ್ನು ಹಸಿರು ವಲಯ ಸ್ಥಾಪನೆಗಾಗಿ ಭೂಸ್ವಾಧೀನ ಮಾಡುವ ಪ್ರಸ್ತಾವನೆ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಈ ವಿಷಯದಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಲು ಉದ್ದೇಶಿಸಲಾಗಿತ್ತು.
ಶಾಂತಿಗುಡ್ಡೆ, ಧೂಮಾವತಿ ಧಾಮ ಮತ್ತು ಒಡ್ಡಿದಕಳ ಪ್ರದೇಶಗಳ ನಿವಾಸಿಗಳಿಗೆ ಕೈಗಾರಿಕೆಗಳಿಂದ ಉಂಟಾಗುತ್ತಿದೆ ಎಂದು ತಿಳಿಸಲಾಗುತ್ತಿರುವ ಮಾಲಿನ್ಯ ಮತ್ತು ಪರಿಸರ ಸಮಸ್ಯೆಗಳ ಕುರಿತು ಪದೇಪದೇ ದೂರುಗಳು ಬರುತ್ತಿವೆ. ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಶೀಲನೆ ನಡೆಸಿ, ಸಮಸ್ಯೆ ದೃಢಪಟ್ಟಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜನವಸತಿ ಪ್ರದೇಶಗಳ ರಕ್ಷಣೆಗಾಗಿ ಹಸಿರು ವಲಯ ಸ್ಥಾಪನೆ ಹಾಗೂ ಅಗತ್ಯವಿದ್ದಲ್ಲಿ ಭೂಸ್ವಾಧೀನ ಸೇರಿದಂತೆ ನಿವಾಸಿಗಳ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಬಜಪೆ ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಡಿ 2022-23ನೇ ಸಾಲಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಬೇಕಿರುವ ಉಳಿಕೆ ಅನುದಾನ ಮೊತ್ತ ಇನ್ನೂ ಬಿಡುಗಡೆಯಾಗದಿರುವುದು ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ. ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಈ ಬಾಕಿ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡಿ, ಅನುಮೋದಿತ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಬಾಕಿ ಅನುದಾನ ಬಿಡುಗಡೆ ವಿಳಂಬವಾಗಿರುವ ಕಾರಣವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
16ನೇ ಹಣಕಾಸು ಆಯೋಗದ ಶಿಫಾರಸಿನಡಿ ಸ್ಥಳೀಯ ಸಂಸ್ಥೆಗಳಿಗೆ ದೊರಕಬೇಕಿರುವ ಅನುದಾನವು ಕೇಂದ್ರ ಮಟ್ಟದ ಹಣಕಾಸು ಹಂಚಿಕೆ ವ್ಯವಸ್ಥೆಯ ಭಾಗವಾಗಿದ್ದು, ರಾಜ್ಯ ಸರ್ಕಾರದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ತಲುಪಬೇಕಾಗಿದೆ. ಬಜಪೆ ಪಟ್ಟಣ ಪಂಚಾಯಿತಿಯ ಆಡಳಿತಕ್ಕೆ ಬಂದು ಸುಮಾರು ಒಂಬತ್ತು ತಿಂಗಳು ಕಳೆದರೂ ಈ ಅನುದಾನವು ಇದುವರೆಗೆ ಬಿಡುಗಡೆಯಾಗದಿರುವುದು ವಿಷಾದಕರವಾಗಿದೆ.
ಪಟ್ಟಣದ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಅತ್ಯಂತ ಅಗತ್ಯವಾಗಿರುವುದರಿಂದ, ಬಜಪೆ ಪಟ್ಟಣ ಪಂಚಾಯಿತಿಗೆ 16ನೇ ಹಣಕಾಸು ಆಯೋಗದಡಿ ಬರಬೇಕಿರುವ ಅನುದಾನ ಎಷ್ಟು, ಇದುವರೆಗೆ ಏಕೆ ಬಿಡುಗಡೆ ಆಗಿಲ್ಲ ಮತ್ತು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿ, ತಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ.
ರಾಜ್ಯ ಹಣಕಾಸು ಆಯೋಗದಡಿ ಬಜಪೆ ಪಟ್ಟಣ ಪಂಚಾಯಿತಿಗೆ ದೊರಕಬೇಕಿರುವ ಅನುದಾನವೂ ಸಮರ್ಪಕವಾಗಿ ಬಿಡುಗಡೆಯಾಗದಿರುವುದು ಪಟ್ಟಣದ ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯಗಳ ನಿರ್ವಹಣೆಗೆ ಆರ್ಥಿಕ ಅಡಚಣೆಯಾಗಿದೆ. SFC ಅನುದಾನವು ಸ್ಥಳೀಯ ಸಂಸ್ಥೆಗಳ ವಿವಿಧ ಅಭಿವೃದ್ಧಿ ಮತ್ತು ಮೂಲಭೂತ ಸೇವೆಗಳಿಗಾಗಿ ಪ್ರಮುಖ ಹಣಕಾಸಿನ ಮೂಲವಾಗಿದೆ.
ಆದ್ದರಿಂದ ಬಜಪೆ ಪಟ್ಟಣ ಪಂಚಾಯಿತಿಗೆ SFC ಅಡಿಯಲ್ಲಿ ಮಂಜೂರಾಗಿರುವ ಮತ್ತು ಬಿಡುಗಡೆಯಾಗಿರುವ ಮೊತ್ತದ ವಿವರವನ್ನು ಸರ್ಕಾರ ಸ್ಪಷ್ಟಪಡಿಸಿ, ಬಾಕಿ ಇರುವ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಅನುದಾನಗಳು ವಿಳಂಬವಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಮೇಲಿನ ಎಲ್ಲವೂ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ನೇರ ಸಮಸ್ಯೆಗಳು ಮತ್ತು ಸಾರ್ವಜನಿ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಾಗಿವೆ. ಇವುಗಳನ್ನು KDP ಸಭೆಯಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿತ್ತು.
ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಸಭೆಗಳು ನಡೆಯುವಾಗ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಮಂಡಿಸಲು ಅವಕಾಶ ನೀಡದಿದ್ದರೆ, ಸ್ಥಳೀಯ ಆಡಳಿತವು ಜನರ ಕೆಲಸವನ್ನು ಪರಿಣಾಮಕಾರಿಯಾಗಿ ಹೇಗೆ ಮಾಡುವುದು? ಎಂಬುದು ನಮ್ಮ ಪ್ರಶ್ನೆಯಾಗಿದೆ.

Advt

ಮುಂದಿನ ದಿನಗಳಲ್ಲಿ ನಡೆಯುವ KDP ಸೇರಿದಂತೆ ಜಿಲ್ಲಾ ಮಟ್ಟದ ಅಭಿವೃದ್ಧಿ ಸಭೆಗಳಿಗೆ ಬಜಪೆ ಪಟ್ಟಣ ಪಂಚಾಯತ್‌ ಅಧ್ಯಕ್ಷರು ಅಥವಾ ಅಧಿಕೃತ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿ, ಬಜಪೆಯ ಜನರ ಸಮಸ್ಯೆಗಳನ್ನು ನೇರವಾಗಿ ಮಂಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶರ್ಮಿಳಾ ಶೆಟ್ಟಿ, ರಾಜೇಶ್ ಅಮೀನ್, ದಿನೇಶ್ ಶೆಟ್ಟಿ, ಜಯಂತ್ ಪೂಜಾರಿ, ಸುಪ್ರಿತಾ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!