
ವಾರ್ಷಿಕ 81.68 ಕೋಟಿ ರೂ. ವಹಿವಾಟು
ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ಘೋಷಣೆ
ಮೂಡುಬಿದಿರೆ: ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.30ರಂದು ಮೂಡುಬಿದಿರೆ ಕನ್ನಡ ಭವನದಲ್ಲಿ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಜನ್ಯ ಡಿ. ಶೆಟ್ಟಿ ಅವರು ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅವರು, 2025-26ನೇ ಸಾಲಿನಲ್ಲಿ ಸಂಘವು 81.68 ಕೋಟಿ ರೂ. ವಹಿವಾಟು ನಡೆಸಿ, 57.09 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು. ಪ್ರಸ್ತುತ ಸಂಘವು 33.47 ಲಕ್ಷ ರೂ. ಪಾಲು ಬಂಡವಾಳ, 3,608 ಸದಸ್ಯರು, 10.99 ಕೋಟಿ ರೂ. ಠೇವಣಿ ಹಾಗೂ 8.76 ಕೋಟಿ ರೂ. ಸಾಲ ವಿತರಣೆ ಹೊಂದಿದೆ. ಸಾಲ ವಸೂಲಾತಿ ಪ್ರಮಾಣ ಶೇ.98.94 ಆಗಿದ್ದು, ಈ ಸಾಲಿನಲ್ಲಿಯೂ ಸಂಘವು ಆಡಿಟ್ ವರ್ಗೀಕರಣದಲ್ಲಿ ‘A’ ದರ್ಜೆ ಪಡೆದಿದೆ. ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಘವು 1.11 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಸುಸಜ್ಜಿತ ಹವಾನಿಯಂತ್ರಿತ ಕಚೇರಿ ನಿರ್ಮಿಸಿರುವುದು ಸಂತಸ ತಂದಿದೆ. ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದು, ಸದಸ್ಯರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಠೇವಣಿ ಸಂಗ್ರಹ, ಸಾಲ ವಿತರಣೆ ಹಾಗೂ ಸಾಲ ವಸೂಲಾತಿ ಸೇರಿದಂತೆ ಸಂಘದ ಎಲ್ಲಾ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸಲಾಗಿದೆ. ಪ್ರತಿಯೊಬ್ಬ ಸದಸ್ಯರೂ ಆರ್.ಡಿ., ಎಫ್.ಡಿ. ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಅವರು ಮನವಿ ಮಾಡಿದರು.
ಸ್ವಸಹಾಯ ಗುಂಪು ಸದಸ್ಯರಿಗೆ ಕಲ್ಯಾಣ ನಿಧಿ
ಸಭೆಯಲ್ಲಿ *’ಸ್ವಸಹಾಯ ಗುಂಪು ಕಲ್ಯಾಣ ನಿಧಿ’* ಯೋಜನೆಯನ್ನು ಘೋಷಿಸಲಾಯಿತು. ಸ್ವಸಹಾಯ ಸಂಘದ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಸಾಲದ ಬಾಕಿ ಮೊತ್ತದಲ್ಲಿ 50,000 ರೂ. ವರೆಗೆ ಮನ್ನಾ ಮಾಡುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಘೋಷಣೆ ಮಾಡಲಾಯಿತು.

ಸಂಘದಲ್ಲಿ ಒಟ್ಟು 65 ಸ್ವಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಉತ್ತಮ ಸಾಧನೆ ಮಾಡಿದ 10 ಸ್ವಸಹಾಯ ಗುಂಪುಗಳನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶಿವರಾಮ್ ಜೆ.ಶೆಟ್ಟಿ, ನಿರ್ದೇಶಕರಾದ ವಿಶ್ವನಾಥ್ ಬೋವಿ, ರಾಮಚಂದ್ರ ಕೆಂಬಾರೆ, ಬಾಬು ಎಂ., ನಾಗರಾಜ್ ಶೆಟ್ಟಿ, ಅಬುಲಾಲ್ ಪುತ್ತಿಗೆ, ದಯಾನಂದ, ನಾರಾಯಣ ಶೆಟ್ಟಿ, ಶಾಂತ, ಗೀತಾಜಲಿ ಹಾಗೂ ರೆನಿಟಾ ಗ್ರೇಸಿ ಡಿ’ಸೋಜ ಉಪಸ್ಥಿತರಿದ್ದರು. ನಿರ್ದೇಶಕ ದಯಾನಂದ ವಂದಿಸಿದರು.
