ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನ ಸಿಎಂ ಕುರ್ಚಿ ಜಿದ್ದಾಜಿದ್ದಿನ ಮಹಾಸಂಗ್ರಾಮ ಈಗ ದೇಶದ ರಾಜಧಾನಿಯಲ್ಲಿ ರೋಚಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದಿರಾ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಜಂಟಿ ಸಭೆಯ ನಡುವೆಯೇ, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತ್ರ ಪ್ರತ್ಯೇಕವಾಗಿ ನಡೆಸುತ್ತಿರುವ ʻಒನ್-ಟು-ಒನ್’ ರಹಸ್ಯ ಸಭೆ ಈಗ ಇಡೀ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ತೆರೆಮರೆಯ ಈ ಮಾತುಕತೆ ಸಿದ್ದರಾಮಯ್ಯ ಅವರ ಕುರ್ಚಿ ಭದ್ರಪಡಿಸಲಿದೆಯೇ ಅಥವಾ ಪಲ್ಲಟಕ್ಕೆ ದಾರಿಯಾಗಲಿದೆಯೇ ಎಂಬ ಕುತೂಹಲ ಕ್ಷಣಕ್ಷಣಕ್ಕೂ ಉತ್ತುಂಗಕ್ಕೇರಿದೆ.

ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಮಾತ್ರ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಸುದೀರ್ಘ ಸಮಾಲೋಚನೆ ನಡೆಸಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ದೆಹಲಿ ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಯ ನಂತರದ ರಾಜ್ಯದ ಪರಿಸ್ಥಿತಿ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆ ನಾಯಕತ್ವ ಬದಲಾವಣೆ ಮಾಡಿದರೆ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ರಾಹುಲ್ ನೇರ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ತಮ್ಮ ಆಪ್ತ ಸಚಿವರ ಬೆಂಬಲದ ಬಲವನ್ನು ಹೈಕಮಾಂಡ್ ಮುಂದೆ ಗಟ್ಟಿಯಾಗಿಯೇ ಮಂಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರತ್ಯೇಕ ರಹಸ್ಯ ಸಭೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಯಾಂಪ್‌ನಲ್ಲಿ ದಿಢೀರ್ ಬಿಗು ವಾತಾವರಣ ನಿರ್ಮಾಣವಾಗಿದೆ. 2023ರ ಗೆಲುವಿನ ಬಳಿಕ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆಯ ಸೂತ್ರದಂತೆ ತಮಗೆ ಪಟ್ಟ ಸಿಗಲೇಬೇಕು ಎಂದು ಪಟ್ಟು ಹಿಡಿದಿರುವ ಡಿಕೆಶಿ ಮತ್ತು ಅವರ ಸೋದರ ಡಿ.ಕೆ. ಸುರೇಶ್, ಇಂದಿರಾ ಭವನದ ಮತ್ತೊಂದು ಭಾಗದಲ್ಲಿ ಹೈಕಮಾಂಡ್ ಕರೆಯ ಬಿಗ್ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ. ರಾಹುಲ್-ಸಿದ್ದು ಪ್ರತ್ಯೇಕ ಭೇಟಿಯು ಡಿಕೆಶಿ ಬೆಂಬಲಿಗರ ಎದೆಯೊಡೆಸಿರುವುದಂತೂ ಅಕ್ಷರಶಃ ಸತ್ಯ.

ಮತ್ತೊಂದೆಡೆ, ಸಿದ್ದರಾಮಯ್ಯ ದೆಹಲಿಗೆ ಬರುವ ಮುನ್ನವೇ ಕರೆದಿದ್ದ ‘ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್’ ಈಗ ವರ್ಕ್‌ಔಟ್ ಆದಂತೆ ಕಾಣುತ್ತಿದೆ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಸೇರಿದಂತೆ ರಾಜ್ಯದ ಪ್ರಮುಖ ಸಚಿವರು ಸಿಎಂ ಬೆನ್ನಿಗೆ ನಿಂತಿರುವುದು ಹೈಕಮಾಂಡ್ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ. ಒಂದು ವೇಳೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಮನವೊಲಿಸಿ ಡಿಕೆಶಿಗೆ ದಾರಿ ಮಾಡಿಕೊಡಲು ಸೂಚಿಸಿದರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ ಏಳುವುದು ಗ್ಯಾರಂಟಿ ಎನ್ನುತ್ತಾರೆ ರಾಜಕೀಯ ಪಂಡಿತರು.

ಸದ್ಯಕ್ಕೆ ದೆಹಲಿಯ ಇಂದಿರಾ ಭವನ ಇಡೀ ದೇಶದ ರಾಜಕೀಯದ ಕೇಂದ್ರಬಿಂದುವಾಗಿದೆ. ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಮಹಾಪಂಚಾಯಿತಿ ಇನ್ನು ಕೆಲವೇ ಗಂಟೆಗಳಲ್ಲಿ ಕರ್ನಾಟಕದ ಮುಂದಿನ ಭವಿಷ್ಯವನ್ನು ಪ್ರಕಟಿಸಲಿದೆ. ಸಿದ್ದರಾಮಯ್ಯ ಅವರ ರಾಜಕೀಯ ಚಾಣಕ್ಯತನ ಗೆದ್ದು ಕುರ್ಚಿ ಉಳಿಯುತ್ತಾ ಅಥವಾ ಡಿಕೆಶಿಯವರ ನಿರಂತರ ಕಾಯುವಿಕೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ ಎಂಬ ಬಿಗ್ ಸಸ್ಪೆನ್ಸ್ ಸದ್ಯದಲ್ಲೇ ಬಯಲಾಗಲಿದೆ!
