ನವದೆಹಲಿ:ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವ ಜಿರಳೆಗಳ ಆರ್ಭಟ ಈಗ ನೇರವಾಗಿ ದೇಶದ ಅತ್ಯುನ್ನತ ನ್ಯಾಯಾಲಯದ (Supreme Court) ಕದ ತಟ್ಟಿದೆ! ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ನೀಡಿದ್ದ ‘ಜಿರಳೆ’ ಹೇಳಿಕೆಯನ್ನೇ ಬಂಡವಾಳ ಮಾಡಿಕೊಂಡು ಹುಟ್ಟಿಕೊಂಡ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಭರ್ಜರಿ ಕಾಮಿಡಿ ಶಾಕ್ ನೀಡಿದೆ. ನ್ಯಾಯಾಂಗದ ಮಾನ ಕಳೆಯಲಾಗುತ್ತಿದೆ ಎಂದು ಭಾವುಕರಾದ ವಕೀಲರಿಗೆ, “ಪ್ರತಿಯೊಂದನ್ನೂ ಇಷ್ಟೊಂದು ಸೆಂಟಿಮೆಂಟಲ್ ಆಗಿ ತೆಗೆದುಕೊಳ್ಳಬೇಡಿ!” ಎಂದು ಸಿಜೆಐ ಸೂರ್ಯಕಾಂತ್ ಅವರಿದ್ದ ಪೀಠವು ನಸುನಗುತ್ತಲೇ ಕಿವಿಮಾತು ಹೇಳಿದೆ.

ಈ ಇಡೀ ಹೈಡ್ರಾಮಾಕ್ಕೆ ಕಾರಣ ವಕೀಲ ರಾಜಾ ಚೌಧರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL). ಕೋರ್ಟ್ ರೂಮಿನಲ್ಲಿ ಜಡ್ಜ್‌ಗಳು ಆಡುವ ಮಾತುಗಳನ್ನು ಕಟ್ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಜಿರಳೆ ಪಾರ್ಟಿಯವರು ಸಿಕ್ಕಾಪಟ್ಟೆ ಲೈಕ್ಸ್ ಮತ್ತು ದುಡ್ಡು ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಟ್ರೇಡ್‌ಮಾರ್ಕ್ (ಬ್ರ್ಯಾಂಡ್) ಮಾಡಲು ಅರ್ಜಿ ಹಾಕಿದ್ದಾರೆ ಎಂದು ವಕೀಲರು ಕೋರ್ಟ್‌ನಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದರು. “ಸ್ವಾಮಿ, ಈ ಜಿರಳೆಗಳ ಹಿಂದೆ ಯಾರಿದ್ದಾರೆ? ಇವರಲ್ಲಿ ಯಾರೆಲ್ಲಾ ನಕಲಿ ವಕೀಲರು ಮತ್ತು ನಕಲಿ ಡಿಗ್ರಿ ಸರ್ಟಿಫಿಕೇಟ್ ಹೊಂದಿದ್ದಾರೆ ಎಂದು ಪತ್ತೆ ಹಚ್ಚಲು ತಕ್ಷಣ ಸಿಬಿಐ ತನಿಖೆಗೆ ಆದೇಶಿಸಿ, ತುರ್ತು ವಿಚಾರಣೆ ನಡೆಸಿ” ಎಂದು ವಕೀಲರು ಹಠ ಹಿಡಿದರು.

ಆದರೆ, ಈ ಜಿರಳೆಗಳ ಇಂಟರ್ನೆಟ್ ಕ್ರೇಜ್ ಕಂಡು ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಸಿಜೆಐ ಸೂರ್ಯಕಾಂತ್, ಜಸ್ಟಿಸ್ ಜಾಯ್ಮಾಲ್ಯ ಬಾಗ್ಚಿ ಮತ್ತು ಜಸ್ಟಿಸ್ ವಿ.ಎಮ್. ಪಂಚೋಲಿ ಅವರಿದ್ದ ಪೀಠವು, “ಇದರಲ್ಲಿ ಯಾವುದೇ ತುರ್ತು ಇಲ್ಲ, ನಿಯಮದ ಪ್ರಕಾರ ಯಾವಾಗ ಬರಬೇಕೋ ಆವಾಗ ನೋಡೋಣ” ಎಂದು ಅರ್ಜಿಯನ್ನು ಸೈಡಿಗೆ ಎತ್ತಿಟ್ಟಿದೆ. “ಕೋರ್ಟ್ ಮಾತುಗಳನ್ನು ಕಮರ್ಷಿಯಲ್ ಆಗಿ ಬಳಸಿ ಮೀಮ್ಸ್ ಮಾಡಲಾಗುತ್ತಿದೆ” ಎಂದು ವಕೀಲರು ಕಣ್ಣೀರು ಹಾಕಿದಾಗ, “ಡೋಂಟ್ ಟೇಕ್ ಇಟ್ ಸೋ ಸೆಂಟಿಮೆಂಟಲಿ” ಎಂದು ಕೋರ್ಟ್ ರೂಮಿನಲ್ಲೇ ಸಿಜೆಐ ಖಡಕ್ ಟಾಂಗ್ ಕೊಟ್ಟಿದ್ದಾರೆ.

ಅಂದಹಾಗೆ, ಈ ಇಡೀ ಜಿರಳೆ ಪುರಾಣ ಶುರುವಾಗಿದ್ದು ಇದೇ ಸಿಜೆಐ ಸೂರ್ಯಕಾಂತ್ ಅವರ ಬಾಯಿಂದಲೇ! ಸೀನಿಯರ್ ಅಡ್ವೊಕೇಟ್ ಹುದ್ದೆಗಾಗಿ ಹಠ ಹಿಡಿದಿದ್ದ ವಕೀಲರೊಬ್ಬರನ್ನು ತರಾಟೆಗೆ ತೆಗೆದುಕೊಳ್ಳುವಾಗ, “ದೇಶದಲ್ಲಿ ಕೆಲಸವಿಲ್ಲದ ಕೆಲವು ಯುವಕರು ಜಿರಳೆಗಳಂತೆ (Cockroaches) ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ, ಆಕ್ಟಿವಿಸ್ಟ್ ಆಗುತ್ತಿದ್ದಾರೆ” ಎಂದು ಸಿಜೆಐ ಹೇಳಿದ್ದರು. ಆಮೇಲೆ ಅವರು, “ನಾನು ನಿರುದ್ಯೋಗಿ ಯುವಕರನ್ನು ಜಿರಳೆ ಎನ್ನಲಿಲ್ಲ, ನಕಲಿ ಡಿಗ್ರಿ ತಂದು ವಕೀಲರಾಗುವ ಪರಾವಲಂಬಿಗಳನ್ನು ಹಾಗೆಂದೆ” ಎಂದು ಸ್ಪಷ್ಟನೆ ನೀಡಿದರೂ, ಇಂಟರ್ನೆಟ್ ಯುವಕರು ಮಾತ್ರ ಆ ಜಿರಳೆ ಬಿರುದನ್ನು ಹೆಮ್ಮೆಯಿಂದ ಸ್ವೀಕರಿಸಿ, ಬಿಜೆಪಿಯನ್ನೇ ಹಿಂದಿಕ್ಕುವಷ್ಟು ದೊಡ್ಡ ಫಾಲೋವರ್ಸ್ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ.

ಯಾವಾಗ ಈ ಜಿರಳೆಗಳು ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್‌ಗಳು ಮತ್ತು ಕಮೆಂಟ್‌ಗಳ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಲು ಶುರು ಮಾಡಿದವೋ, ಆಗ ಕೇಂದ್ರ ಸರ್ಕಾರಕ್ಕೆ ಭದ್ರತೆಯ ಆತಂಕ ಶುರುವಾಗಿ ಅವರ ಅಕೌಂಟ್ ಮತ್ತು ವೆಬ್‌ಸೈಟ್ ಮೇಲೆ ಡಿಜಿಟಲ್ ‘ಹಿಟ್’ (HIT) ಸ್ಪ್ರೇ ಹೊಡೆದು ಬ್ಯಾನ್ ಮಾಡಲಾಗಿತ್ತು. ಕೇಂದ್ರ ಸಚಿವ ಕಿರಣ್ ರಿಜಿಜು ಅವರು, “ಈ ಜಿರಳೆಗಳಿಗೆ ಪಾಕಿಸ್ತಾನದಿಂದ ಸಪೋರ್ಟ್ ಸಿಗುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದರೆ, ಇದಕ್ಕೆ ಜಿರಳೆ ಪಡೆಯ ಅಧಿನಾಯಕ ಅಭಿಜೀತ್ ಲೈವ್ ಡೇಟಾ ತೋರಿಸಿ, “ನಮ್ಮ ಪಾರ್ಟಿಯಲ್ಲಿರುವ ಶೇ. 94 ರಷ್ಟು ಜಿರಳೆಗಳು ಅಪ್ಪಟ ಸ್ವದೇಶಿ ಭಾರತೀಯ ಯುವಕರು!” ಎಂದು ತಿರುಗೇಟು ನೀಡಿದ್ದರು. ಸದ್ಯಕ್ಕೆ ಸುಪ್ರೀಂ ಕೋರ್ಟ್ ಕೂಡ ಈ ಜಿರಳೆಗಳ ಕಾಮಿಡಿಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳದ ಕಾರಣ, ವಕೀಲರ ಸಿಬಿಐ ತನಿಖೆಯ ಕನಸಿಗೆ ತಣ್ಣೀರು ಬಿದ್ದಿದೆ!
