ರಾಜ್ಯ ರಾಜಕಾರಣದಲ್ಲಿ ಮಹಾ ಭೂಕಂಪ: ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ದಿಲ್ಲಿ ದಂಡಯಾತ್ರೆ! ಹೈಕಮಾಂಡ್‌ನಿಂದ ಡಿಕೆಶಿಗೆ ಕಟು ಸಂದೇಶ?

ಬೆಂಗಳೂರು/ದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಮುಖ್ಯಮಂತ್ರಿ ಕುರ್ಚಿಯ ಜಿದ್ದಾಜಿದ್ದಿನ ಸಮರ ಈಗ ಹಠಾತ್ ಸ್ಪೋಟಗೊಂಡಿದ್ದು, ಹೈವೋಲ್ಟೇಜ್ ರಾಜಕೀಯ ಡ್ರಾಮಾವಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ಹೈಕಮಾಂಡ್ ಮುಂದೆ ತಮ್ಮ ಬಲ ಪ್ರದರ್ಶಿಸಲು ದೆಹಲಿಗೆ ದಂಡಯಾತ್ರೆ ಹೊರಟಿದ್ದಾರೆ. ಅತ್ಯಂತ ರೋಚಕ ಸಂಗತಿಯೆಂದರೆ, ಸಿದ್ದರಾಮಯ್ಯನವರು ದಿಲ್ಲಿಗೆ ಒಬ್ಬರೇ ಹೋಗುತ್ತಿಲ್ಲ, ಬದಲಿಗೆ ತಮ್ಮ ಬೆಂಬಲಕ್ಕಿರುವ ಸಚಿವರು ಮತ್ತು ಶಾಸಕರ ಬೃಹತ್ ಪಡೆಯನ್ನೇ ಜೊತೆಗೆ ಕರೆದೊಯ್ಯುತ್ತಿದ್ದಾರೆ ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.

ಮತ್ತೊಂದೆಡೆ, ಕಳೆದ ಒಂದು ವರ್ಷದಿಂದ ಸಿಎಂ ಪಟ್ಟಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಭಾರೀ ಶಾಕ್ ನೀಡಿದೆ ಎನ್ನಲಾಗಿದೆ. ದೆಹಲಿಯ ಕೇಂದ್ರ ನಾಯಕರು ಸಿದ್ದರಾಮಯ್ಯನವರನ್ನು ಮಾತುಕತೆಗೆ ಕರೆದಿದ್ದಾರಾದರೂ, ಡಿಕೆಶಿಗೆ ಮಾತ್ರ ಯಾವುದೇ ಬುಲಾವ್ ಅಥವಾ ಸಂದೇಶ ಕಳುಹಿಸಿಲ್ಲ. ಹೈಕಮಾಂಡ್‌ನ ಈ ನಡೆ ಡಿಕೆಶಿ ಪಾಳಯದಲ್ಲಿ ತೀವ್ರ ಆತಂಕ ಮೂಡಿಸಿದ್ದು, ಸಿಎಂ ಕುರ್ಚಿಯನ್ನು ವಶಪಡಿಸಿಕೊಳ್ಳುವ ಅವರ ಕನಸಿಗೆ ಸದ್ಯಕ್ಕೆ ಹಿನ್ನಡೆಯಾಗುವ ಮುನ್ಸೂಚನೆ ಸಿಕ್ಕಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ “ಮುಂದಿನ ಸಿಎಂ ಯಾರು?” ಎಂಬ ಮಾಧ್ಯಮಗಳ ದೈನಂದಿನ ಚರ್ಚೆ ಮತ್ತು ಆಂತರಿಕ ಕಚ್ಚಾಟದ ನಡುವೆ ಆಡಳಿತವೇ ಸಂಪೂರ್ಣವಾಗಿ ಹಳಿ ತಪ್ಪಿದೆ. ಈಗ ಸಿದ್ದರಾಮಯ್ಯನವರು ತಮ್ಮ ಜೊತೆಗೆ ಸಚಿವರ ದಂಡನ್ನು ಕರೆದೊಯ್ದು ಶಕ್ತಿ ಪ್ರದರ್ಶನ ಮಾಡುತ್ತಿರುವುದರಿಂದ ಹೈಕಮಾಂಡ್ ಮೇಲೂ ಒತ್ತಡ ಬೀಳುವುದು ನಿಶ್ಚಿತ. ಬಹುತೇಕ ಶಾಸಕರು ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವುದರಿಂದ ಈ ರಾಜಕೀಯ ಜೂಜಾಟದಲ್ಲಿ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಡಿ.ಕೆ. ಶಿವಕುಮಾರ್ ಒಂದು ವೇಳೆ ತಾವಾಗಿಯೇ ದೆಹಲಿಗೆ ಹೋದರೂ ಹೈಕಮಾಂಡ್‌ನಿಂದ ಅವರಿಗೆ ಯಾವುದೇ ಸಕಾರಾತ್ಮಕ ಭರವಸೆ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಪಟ್ಟದ ಆಸೆಯೊಂದಿಗೆ ದಿಲ್ಲಿ ಮೆಟ್ಟಿಲೇರಲಿರುವ ಡಿಕೆಶಿ, ಅಂತಿಮವಾಗಿ ಬರಿಗೈಲಿ (Empty hands) ಬೆಂಗಳೂರಿಗೆ ಮರಳಬೇಕಾದೀತು ಎಂಬ ಬಿಸಿಬಿಸಿ ಚರ್ಚೆಗಳು ಈಗ ರಾಜ್ಯ ರಾಜಕೀಯದ ಗಲಿಬಿಲಿಯನ್ನು ಮತ್ತಷ್ಟು ಹೆಚ್ಚಿಸಿವೆ.

error: Content is protected !!