7 ವರ್ಷಗಳ ನಂತರ ಮಂಗಳೂರಿಗೆ “ಅಮ್ಮ” ಆಗಮನ: ಮೇ 28, 29 ರಂದು ‘ಅಮೃತ ಸಂಗಮ 2026’

ಮಂಗಳೂರು: ವಿಶ್ವದಾದ್ಯಂತ ಜನರ ಆರಾಧ್ಯಮಾತೆಯಾಗಿರುವ, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು (ಅಮ್ಮ) ಸುದೀರ್ಘ 7 ವರ್ಷಗಳ ನಂತರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮೇ 28 ಮತ್ತು 29 ರಂದು ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ “ಅಮೃತ ಸಂಗಮ 2026” ಜೀವನೋಲ್ಲಾಸದ ಮಹೋತ್ಸವ ನಡೆಯಲಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಹಾಗೂ ಆಯೋಜನಾ ಸಮಿತಿಯ ಅಧ್ಯಕ್ಷರಾದ  ಸುರೇಶ್ ಅಮೀನ್  ತಿಳಿಸಿದರು.

ಮಾತಾ ಅಮೃತಾನಂದಮಯಿ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಸುರೇಶ್ ಅಮೀನ್ , ಇಲ್ಲಿನ ಅಮ್ಮನ ಭಕ್ತರ ಬಗ್ಗೆ ಅಮ್ಮನವರಿಗೆ ಅತ್ಯಂತ ಮಮತೆಯಿದೆ. ಬಹುಶಃ ಅದೇ ಕಾರಣದಿಂದ ಈ ಬಾರಿ ಕೇರಳದಿಂದ ಹೊರಗಿನ ಏಕೈಕ ಸ್ಥಳವಾಗಿ ಕರ್ನಾಟಕದಲ್ಲಿ ಮಂಗಳೂರು ಮಾತ್ರ ಆಯ್ಕೆಯಾಗಿರುವುದು ವಿಶೇಷವಾಗಿದೆ. ಇದು ಮಂಗಳೂರಿನಲ್ಲಿ ನಡೆಯುತ್ತಿರುವ 25ನೇ ವರ್ಷದ ಸಂಭ್ರಮಾಚರಣೆಯ ವಿಶೇಷತೆಯೂ ಆಗಿರುವುದರಿಂದ, ಅಮ್ಮನವರಿಗೆ ಪ್ರಿಯವಾದ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳಿಗೆ ಕೂಡಾ ಅಮ್ಮನವರಿಂದಲೇ ಚಾಲನೆ ದೊರಕಿಸುವಂತೆ ಸಕಲ ಪೂರ್ವಸಿದ್ಧತೆಗಳನ್ನು ಭಕ್ತರು ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಮಂಗಳೂರಿನ ಪಡೀಲ್ ನಲ್ಲಿರುವ ಸಂಸ್ಥೆಯೊಂದಕ್ಕೆ ಕನ್ನಡ ಇಂಗ್ಲಿಷ್ ಟೈಪಿಂಗ್ ಬಲ್ಲ ಡಿಟಿಪಿ, ಜೆರಾಕ್ಸ್ ಮೆಷಿನ್ ಆಪರೇಟರ್ ಯುವತಿಯರು ತಕ್ಷಣ ಬೇಕಾಗಿದ್ದಾರೆ. -7676991305

ಮುಂದುವರಿದು ಮಾತನಾಡಿದ ಅವರು, ಅಮ್ಮನವರ ದರ್ಶನಕ್ಕೆ ಯಾವುದೇ ಶುಲ್ಕವಿರುವುದಿಲ್ಲ, ಸಾರ್ವಜನಿಕರಿಗೆ ಮುಕ್ತ ಹಾಗೂ ಉಚಿತ ಪ್ರವೇಶವಿರುತ್ತದೆ. ಭಕ್ತರ ಅನುಕೂಲಕ್ಕಾಗಿ ಟೋಕನ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 9.30ರ ಒಳಗೆ ಬಂದು ಕುಳಿತವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ. ಜನರು ಬಂದ ಸಮಯದ ಅನುಗುಣವಾಗಿ ಆನಂತರ ದರ್ಶನ ಟೋಕನ್ ನೀಡಲಾಗುವುದು. ಪುಟ್ಟ ಮಕ್ಕಳಿಗೂ ಟೋಕನ್ ಪಡೆಯುವುದು ಕಡ್ಡಾಯವಾಗಿದೆ. ಅಮ್ಮನವರ ಸತ್ಸಂಗ, ಧ್ಯಾನ ಹಾಗೂ ಭಜನೆಯ ಬಳಿಕ, ಟೋಕನ್ ಸರದಿಯಂತೆ ಬರುವ ಪ್ರತಿಯೊಬ್ಬ ಭಕ್ತರನ್ನೂ ಅಮ್ಮನವರು ಅಪ್ಪುಗೆಯ ಅಮೃತಾಲಿಂಗನದ ಮೂಲಕ ಅನುಗ್ರಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಡಾ. ವಸಂತಕುಮಾರ ಪೆರ್ಲ ಮಾತನಾಡಿ, ಅಮ್ಮನವರು ತಮ್ಮ ಪ್ರೇಮಸ್ವರೂಪದಲ್ಲಿ ಜಾತಿ, ಮತ, ಧರ್ಮ, ವರ್ಣದ ಭೇದವಿಲ್ಲದೆ ಎಲ್ಲರ ಭಾವನೆಗಳಿಗೆ ಸ್ಪಂದಿಸುತ್ತಾ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅಮ್ಮನವರ ಈ ಭೇಟಿಯ ಪ್ರಯುಕ್ತ “ಓಂ ಶಿವ ಶಕ್ತ್ಯೈಕ್ಯ ರೂಪಿಣ್ಯೈ ನಮಃ” ಎಂಬ ಮಂತ್ರದ ವಿಶೇಷ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗಿದ್ದು, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಈ ವಿಶೇಷ ಲೇಖನ ಯಜ್ಞಕ್ಕೆ ಭಕ್ತರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಮೇ 28 ರಂದು ಬೆಳಗ್ಗೆ 10.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮ ಮತ್ತು ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ ಕಾರ್ಯಕ್ರಮದಲ್ಲಿ ದೇಶದ ಹಾಗೂ ರಾಜ್ಯದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ಡಾ. ಪೆರ್ಲ ಅವರು ವಿವರ ನೀಡಿದರು. ಭಾರತ ಸರ್ಕಾರದ ಸಚಿವರಾದ  ಪ್ರಹ್ಲಾದ್ ಜೋಷಿ ಹಾಗೂ ಕೇಂದ್ರ ರಾಜ್ಯ ಸಚಿವರಾದ  ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸಭಾಪತಿ ಶ್ರೀ ಯು. ಟಿ. ಖಾದರ್ ಫರೀದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕರಾದ  ಡಿ. ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಧಾರ್ಮಿಕ ವಿವರಗಳನ್ನು ನೀಡಿದ ಸಮಿತಿಯು, ಎರಡು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ತನಕವೂ ವೈವಿಧ್ಯಮಯ ಪೂಜೆಗಳು ನಡೆಯಲಿವೆ ಎಂದಿತು. ಮೇ 28 ರ ಗುರುವಾರ ಯಜ್ಞಶಾಲೆಯಲ್ಲಿ ಲಲಿತಾ ಸಹಸ್ರನಾಮ ಅರ್ಚನೆ, ರಾಹು ದೋಷ ನಿವಾರಣಾ ಪೂಜೆ, ಅಮ್ಮನ ಸತ್ಸಂಗ ಹಾಗೂ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮಹಾ ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ಅಲಂಕಾರ ಪೂಜೆ ಮತ್ತು ದೇವಿ ಪೂಜೆ (ಭಗವತಿ ಸೇವೆ) ನಡೆಯಲಿದೆ. ಅದೇ ರೀತಿ ಮೇ 29 ರ ಶುಕ್ರವಾರ ಯಜ್ಞಶಾಲೆಯಲ್ಲಿ ಶನಿ ದೋಷ ನಿವಾರಣ ಪೂಜೆ ಹಾಗೂ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾ ಧನ್ವಂತರಿ ಹೋಮ, ಸುದರ್ಶನ ಹೋಮ ಮತ್ತು ದುರ್ಗಾ ಪೂಜೆಗಳು ಜರುಗಲಿವೆ. ಎರಡೂ ದಿನ ಸಂಜೆಯ ಆರತಿಯ ನಂತರ ಉದಯಾಸ್ತಮಾನ ಪೂಜೆ ಪ್ರಸಾದ ವಿತರಣೆ ಇರುತ್ತದೆ.

ದೂರದೂರುಗಳಿಂದ ಬರುವ ಭಕ್ತರಿಗಾಗಿ ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಸಮಿತಿಯ ಪದಾಧಿಕಾರಿಗಳು, ವಿದೇಶೀ ಭಕ್ತರು ಸೇರಿದಂತೆ ಮುಂಗಡವಾಗಿ ನೊಂದಣಿ ಮಾಡಿದವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಮೇ 28 ಮತ್ತು 29 ರಂದು ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ವಿಶಾಲವಾದ ಅನ್ನಕ್ಷೇತ್ರದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಬಿಸ್ಕೆಟ್ ಸೌಲಭ್ಯವಿರಲಿದ್ದು, ಕಾರ್ಯಕ್ರಮದ ನಂತರ ವಿವಿಧ ಸ್ಥಳಗಳಿಗೆ ತೆರಳಲು ಕೆ.ಎಸ್.ಆರ್.ಟಿ.ಸಿ ಸೇರಿದಂತೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಡಾ. ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್, ಅಮೃತಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ C A ರಾಮನಾಥ್ ಹಾಗೂ ವೈದ್ಯಕೀಯ ಪ್ರಕೋಷ್ಠದ ಡಾ. ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.

error: Content is protected !!