
ಸುರತ್ಕಲ್: ಮುಕ್ಕ ಚೆಕ್ ಪೋಸ್ಟ್ ಸಮೀಪ ಇಂದು ಸಂಜೆ ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಬಾಗಲಕೋಟೆ ನಿವಾಸಿ ಬೀಮ ಮೃತಪಟ್ಟಿದ್ದು ಬೈಕ್ ನಲ್ಲಿದ್ದ ಇತರ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಕೆಲಸ ಮುಗಿಸಿ ಒಂದೇ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್ ಕಡೆ ತೆರಳುತ್ತಿದ್ದ ವೇಳೆ ಭಾರೀ ಲೋಡ್ ಹೊಂದಿದ್ದ ಲಾರಿಯನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಯತ್ನಿಸಿದ ವೇಳೆ ಹಿಂಬದಿಯಲ್ಲಿ ಕೂತಿದ್ದ ಭೀಮ ಎಂಬಾತನಿಗೆ ಲಾರಿ ತಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ತಲೆಯ ಮೇಲಿಂದ ಲಾರಿಯ ಹಿಂಬದಿ ಚಕ್ರಗಳು ಚಲಿಸಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.
ಬೈಕ್ ನಲ್ಲಿದ್ದ ಓರ್ವನ ಕಾಲು ಮುರಿತಕ್ಕೊಳಗಾಗಿದ್ದು ಮತ್ತೋರ್ವನಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.