ಮಂಗಳೂರು: ಕೇಂದ್ರ ಸರ್ಕಾರ ಪುರಸ್ಕೃತ ‘ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ’ಯಡಿ (PMMSY) ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿಯ (SC) ಅರ್ಹ ಫಲಾನುಭವಿಗಳಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಅರ್ಹ ಮೀನುಗಾರರಿಗೆ ‘ಆಳ ಸಮುದ್ರ ಮೀನುಗಾರಿಕಾ ದೋಣಿಗಳ ನಿರ್ಮಾಣಕ್ಕೆ ಸಹಾಯ’ ಮಾಡುವ ಪ್ರಮುಖ ಘಟಕದಡಿ ಆರ್ಥಿಕ ನೆರವು ಹಾಗೂ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಜಿಲ್ಲೆಯ ಅರ್ಹ ಮತ್ತು ಆಸಕ್ತ ಮೀನುಗಾರರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದ್ದು, ಆಸಕ್ತರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಮಂಗಳೂರಿನ ಉರ್ವಾಸ್ಟೋರ್‌ನಲ್ಲಿರುವ ಜಿಲ್ಲಾ ಪಂಚಾಯತ್ ಆವರಣದ ರೆಕಾರ್ಡ್ ಬಿಲ್ಡಿಂಗ್ ಮೊದಲನೇ ಮಹಡಿಯಲ್ಲಿರುವ “ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ” ಭೇಟಿ ನೀಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಾಗಿ ಕೋರಲಾಗಿದೆ.