ಪ.ಗಾಳ ಸಿಎಂ ಆಪ್ತ ಕಾರ್ಯದರ್ಶಿಯ ಹತ್ಯೆ: ಯುಪಿಐ ಪಾವತಿಯಿಂದ ಸಿಕ್ಕಿಬಿದ್ದರು ಶೂಟರ್‌ಗಳು!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೃತ್ತಿಪರ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಯಾಂಕ್ ಮಿಶ್ರಾ ಎಂಬುವವರನ್ನು ಬಂಧಿಸಲಾಗಿದೆ.

ಕೊಲೆ ಮಾಡಿ ಪರಾರಿಯಾಗುತ್ತಿದ್ದ ಹಂತಕರು ಕೋಲ್ಕತ್ತಾ ಸಮೀಪದ ಬಲ್ಲಿ (Bally) ಟೋಲ್ ಗೇಟ್ ಬಳಿ ಯುಪಿಐ (UPI) ಮೂಲಕ ಹಣ ಪಾವತಿಸಿದ್ದರು. ಇದೇ ಹಂತಕರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಪ್ರಮುಖ ಸಾಕ್ಷಿಯಾಯಿತು. ಸಿಸಿಟಿವಿ ದೃಶ್ಯಾವಳಿ ಮತ್ತು ಡಿಜಿಟಲ್ ಪಾವತಿಯನ್ನು ಆಧರಿಸಿ ಬೆನ್ನಟ್ಟಿದ ಪೊಲೀಸರು, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಚಂದ್ರನಾಥ್ ರಥ್ ಅವರು ತಮ್ಮ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿರುವ ಅವರ ನಿವಾಸಕ್ಕಿಂತ ಕೇವಲ 200 ಮೀಟರ್ ದೂರದಲ್ಲಿ ಹಂತಕರು ಅಡ್ಡಗಟ್ಟಿದ್ದಾರೆ. ಮೊದಲಿಗೆ ನಿಸಾನ್ ಮೈಕ್ರಾ ಕಾರಿನ ಮೂಲಕ ಚಂದ್ರನಾಥ್ ಅವರ ವಾಹನವನ್ನು ತಡೆಯಲಾಯಿತು. ಬಳಿಕ ಬೈಕ್‌ನಲ್ಲಿ ಬಂದ ಶೂಟರ್‌ಗಳು ಅತ್ಯಂತ ಹತ್ತಿರದಿಂದ ಗುಂಡಿನ ದಾಳಿ ನಡೆಸಿದರು. ಘಟನೆಯ ಬಳಿಕ ಹಂತಕರು ಮೈಕ್ರಾ ಕಾರನ್ನು ಅಲ್ಲೇ ಬಿಟ್ಟು, ಮತ್ತೊಂದು ಕೆಂಪು ಬಣ್ಣದ ಕಾರು ಮತ್ತು ಬೈಕ್ ಬಳಸಿ ಪರಾರಿಯಾಗಿದ್ದರು.

ಬಂಧಿತ ಮೂವರು ಶೂಟರ್‌ಗಳು ವೃತ್ತಿಪರ ಹಂತಕರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಪ್ರಮುಖ ಆರೋಪಿ ವಿಶಾಲ್ ಶ್ರೀವಾಸ್ತವ ಮೇಲೆ ಕೊಲೆ, ದರೋಡೆ ಸೇರಿದಂತೆ 15ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಕೃತ್ಯಕ್ಕೆ ಬಳಸಿದ್ದ ವಾಹನಗಳು ಕಳವು ಮಾಡಲ್ಪಟ್ಟಿದ್ದವು ಮತ್ತು ಅವುಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಸದ್ಯ ಬಂಧಿತರನ್ನು ಬಾರಾಸತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!