ಪಾಕ್‌ನ 9 ಟೆರರ್ ಕ್ಯಾಂಪ್, 13 ವಿಮಾನಗಳು ಭಸ್ಮವಾಗಿ ಇಂದಿಗೆ ಒಂದು ವರ್ಷ: ಆಪರೇಷನ್ ಸಿಂಧೂರ್‌ನ ಇಂಚಿಂಚು ಮಾಹಿತಿ ಬಿಚ್ಚಿಟ್ಟ ವಾಯುಪಡೆ!

ನವದೆಹಲಿ: ಅದು ಮೇ 7, 2025… ಗಡಿಯಾಚೆಗಿನ ಪಾಪಿಗಳ ಅಡಗುದಾಣಗಳಲ್ಲಿ ಇನ್ನೂ ಸೂರ್ಯೋದಯದ ಮಂಕು ಕವಿದಿತ್ತು. ಆದರೆ, ಭಾರತೀಯ ವಾಯುಪಡೆಯ ಹಕ್ಕಿಗಳು ಆಕಾಶದಲ್ಲಿ ಸಾವಿನ ರಾಗ ಹಾಡುತ್ತಾ ಜಿಗಿದಿದ್ದವು. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆಸಲಾದ ಈ ʻಆಪರೇಷನ್ ಸಿಂಧೂರ್’ ಕೇವಲ ದಾಳಿಯಾಗಿರಲಿಲ್ಲ; ಅದು ಭಾರತದ ಆಕ್ರೋಶದ ಅಗ್ನಿಪರ್ವತವಾಗಿತ್ತು. ಒಂದೇ ದಿನದಲ್ಲಿ ಪಾಕಿಸ್ತಾನದ 9 ಪ್ರಮುಖ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಭಾರತೀಯ ಕ್ಷಿಪಣಿಗಳು ಧೂಳೀಪಟ ಮಾಡಿದವು. ಶತ್ರುಗಳು ಕಣ್ಣು ಬಿಡುವ ಮೊದಲೇ ಅವರ ಪಾಪದ ನೆಲೆಗಳು ಮಸಣವಾಗಿ ಮಾರ್ಪಟ್ಟಿದ್ದವು!

ಆಪರೇಷನ್‌ ಸಿಂಧೂರ್‌ಗೆ ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಲೆಫ್ಟಿನೆಂಟ್ ಜನರಲ್ ರಾಜೀವ್ ಘೈ,  ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರತಿ ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಚರಣೆ ಹೇಗಿತ್ತು ಎಂದು ವಿವರಿಸುತ್ತಿದ್ದಂತೆ ಪಿನ್‌ಡ್ರಾಪ್‌ ಸೈಲೆಂಟ್.

ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆ ಜಗತ್ತೇ ಬೆರಗಾಗುವಂತಹ ಪರಾಕ್ರಮ ತೋರಿತು. ಗಡಿಯಿಂದ ಬರೋಬ್ಬರಿ 300 ಕಿಲೋಮೀಟರ್‌ಗಿಂತಲೂ ಹೆಚ್ಚಿನ ದೂರದಲ್ಲಿ ಹಾರಾಡುತ್ತಿದ್ದ ಶತ್ರು ರಾಷ್ಟ್ರದ ಅತ್ಯಂತ ಪ್ರಬಲ ‌ʻಏರ್‌ಬೋರ್ನ್ ಅಸೆಟ್’ (High-value airborne asset) ಅನ್ನು ಹೊಡೆದುರುಳಿಸಿ ಭಾರತ ಇತಿಹಾಸ ಸೃಷ್ಟಿಸಿತು. ಇದು ಕೇವಲ ಗುರಿ ಮಾತ್ರವಾಗಿರಲಿಲ್ಲ, ಭಾರತದ ತಂತ್ರಜ್ಞಾನ ಮತ್ತು ಶೌರ್ಯಕ್ಕೆ ಸಾಕ್ಷಿಯಾಗಿತ್ತು. ಶತ್ರುಗಳು ತಾವು ಸುರಕ್ಷಿತ ಎಂದು ಭಾವಿಸಿದ್ದ ಜಾಗದಲ್ಲೇ ಭಾರತದ ಕ್ಷಿಪಣಿಗಳು ಮೃತ್ಯುವಾಗಿ ಅಪ್ಪಳಿಸಿದವು!

ಭಾರತದ ದಾಳಿ ಎಷ್ಟು ಭೀಕರವಾಗಿತ್ತೆಂದರೆ, ಪಾಕಿಸ್ತಾನದ ವಾಯುಪಡೆಗೆ ಸುಧಾರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ನೆಲದ ಮೇಲಿದ್ದ ಹಾಗೂ ಆಕಾಶದಲ್ಲಿ ಹಾರುತ್ತಿದ್ದ ಶತ್ರು ರಾಷ್ಟ್ರದ 13 ಯುದ್ಧ ವಿಮಾನಗಳನ್ನು ನಮ್ಮ ವೀರ ಯೋಧರು ಚಿಂದಿ ಚಿತ್ರಾನ್ನ ಮಾಡಿದರು. ಅಷ್ಟೇ ಅಲ್ಲದೆ, ಪಾಕಿಸ್ತಾನದ 11 ಯುದ್ಧ ವಿಮಾನ ನಿಲ್ದಾಣಗಳ (Airfields) ಮೇಲೆ ನಿಖರ ದಾಳಿ ನಡೆಸಿ, ಅವುಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಯಿತು. ಶತ್ರುವಿನ ಹಕ್ಕಿಗಳು ರೆಕ್ಕೆ ಬಿಚ್ಚುವ ಮೊದಲೇ ಭಾರತ ಅವುಗಳನ್ನು ಕತ್ತರಿಸಿ ಹಾಕಿತ್ತು!

“ನಾವು ಮೌನವಾಗಿದ್ದಾಗ ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬೇಡಿ,” ಎಂದು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರತಿ ಇದೇ ಸಂದರ್ಭದಲ್ಲಿ ಗುಡುಗಿದ್ದಾರೆ. “ನಾವು ಶಾಂತಿ ಬಯಸುವವರು, ಆದರೆ ನಮ್ಮವರ ರಕ್ತ ಹರಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಆಪರೇಷನ್ ಸಿಂಧೂರ್ ಕೇವಲ ಒಂದು ಕಾರ್ಯಾಚರಣೆಯಲ್ಲ, ಇದು ನವ ಭಾರತದ ಸಂಕಲ್ಪ. ಈ ದಾಳಿ ಇನ್ನೂ ನಿಂತಿಲ್ಲ, ಕೇವಲ ‘ಪಾಸ್’ (Pause) ಆಗಿದೆ ಅಷ್ಟೇ!” ಎಂಬ ಅವರ ಮಾತುಗಳು ಪಾಕಿಸ್ತಾನದ ಎದೆಯಲ್ಲಿ ನಡುಕ ಹುಟ್ಟಿಸಿವೆ.

ಈ ಕಾರ್ಯಾಚರಣೆಯ ಯಶಸ್ಸಿನ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ದೃಢ ನಿರ್ಧಾರವಿತ್ತು. ಸೇನೆಗೆ ಬೇಕಾದ ಸಂಪೂರ್ಣ ‘ಆಪರೇಷನಲ್ ಫ್ರೀಡಂ’ ನೀಡಲಾಗಿತ್ತು. ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ತ್ರಿವಳಿ ಶಕ್ತಿಗಳು ಒಂದಾಗಿ ನಡೆಸಿದ ಈ ದಾಳಿ, ಪಾಕಿಸ್ತಾನದ ರಕ್ಷಣಾ ಕೋಟೆಯನ್ನು ಅಕ್ಷರಶಃ ಪುಡಿಪುಡಿ ಮಾಡಿತು. ಇವತ್ತು ಆಪರೇಷನ್ ಸಿಂಧೂರ್‌ನ ವೀಡಿಯೋಗಳು ಬಿಡುಗಡೆಯಾಗುತ್ತಿದ್ದರೆ, ಅದು ಭಾರತದ ಸಾರ್ವಭೌಮತ್ವದ ಹೆಮ್ಮೆಯ ಸಂಕೇತವಾಗಿ ಕಾಣುತ್ತಿದೆ ಎಂದು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರತಿ ವಿವರಿಸಿದರು.

error: Content is protected !!