ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಜೋಸೆಫ್ ವಿಜಯ್ ಹಕ್ಕು ಮಂಡನೆ, ನಾಳೆಯೇ ಪಟ್ಟಾಭಿಷೇಕ!?

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಐತಿಹಾಸಿಕ ಜಯ ಸಾಧಿಸಿದ್ದು, ರಾಜ್ಯದ ರಾಜಕೀಯ ಸಮೀಕರಣವನ್ನೇ ಬದಲಿಸಿದೆ. ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್, ಈಗ ಸರ್ಕಾರ ರಚಿಸಲು ಸನ್ನದ್ಧರಾಗಿದ್ದಾರೆ.

ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಲೋಕಭವನಕ್ಕೆ ಆಗಮಿಸಿದ ವಿಜಯ್, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದರು. ಕಾಂಗ್ರೆಸ್ ಸೇರಿದಂತೆ ಇತರ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಅಧಿಕೃತವಾಗಿ ಹಕ್ಕು ಮಂಡಿಸಿದರು. ಇದೇ ವೇಳೆ ಕಾಂಗ್ರೆಸ್ ಶಾಸಕರನ್ನು ಹೂವಿನ ಹಾರ ಮತ್ತು ರೇಷ್ಮೆ ಶಾಲು ಹೊದಿಸಿ ಸ್ವಾಗತಿಸಿದ ವಿಜಯ್, ಮೈತ್ರಿಕೂಟದ ಒಗ್ಗಟ್ಟನ್ನು ಪ್ರದರ್ಶಿಸಿದರು.

ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡಿರುವ ವಿಜಯ್, ಮೇ 7ರಂದು ಬೆಳಗ್ಗೆ 11.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ನೆಹರೂ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ:
ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಯುದ್ಧೋಪಾದಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

ದಶಕಗಳ ಕಾಲ ಚಿತ್ರರಂಗವನ್ನು ಆಳಿದ್ದ ದಳಪತಿ, ಈಗ ಮೊದಲ ಪ್ರಯತ್ನದಲ್ಲೇ ರಾಜಕೀಯ ಅಖಾಡವನ್ನು ಗೆದ್ದು ‘ಮುಖ್ಯಮಂತ್ರಿ’ ಪೀಠಕ್ಕೇರುತ್ತಿರುವುದು ಇಡೀ ದೇಶದ ಗಮನ ಸೆಳೆದಿದೆ.

error: Content is protected !!