ಬಂಟ್ವಾಳದಲ್ಲಿ ಡ್ರಗ್ ಬೇಟೆ: ಕೋಟಿ ಮೌಲ್ಯದ ಎಂಡಿಎಂಎ ಜೊತೆ ಅಣ್ಣ-ತಮ್ಮ ಅಂದರ್!

ಬಂಟ್ವಾಳ: ಇಲ್ಲಿನ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ಪೊಲೀಸರು ನಡೆಸಿದ ಸಿನಿಮೀಯ ಕಾರ್ಯಾಚರಣೆಯಲ್ಲಿ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಿಂದ ಕರಾವಳಿಗೆ ಡ್ರಗ್ಸ್ ಸಾಗಿಸುತ್ತಿದ್ದ ಬೊಳಂತೂರಿನ ಸಹೋದರರಿಬ್ಬರು ಈಗ ಸಲಾಕಿಯ ಹಿಂದೆ ಕಂಬಿ ಎಣಿಸುತ್ತಿದ್ದಾರೆ.

ಶನಿವಾರ ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಉಪ ನಿರೀಕ್ಷಕ ಮಂಜುನಾಥ ಟಿ. ಅವರಿಗೆ ಆ ಖಚಿತ ಮಾಹಿತಿ ತಲುಪಿತ್ತು. ತಡಮಾಡದ ಸಬ್ ಇನ್ಸ್‌ಪೆಕ್ಟರ್, ಕೂಡಲೇ ಸಿಬ್ಬಂದಿಯೊಂದಿಗೆ ಪಂಜಾಲ ಕ್ರಾಸ್‌ನಲ್ಲಿ ಫೀಲ್ಡಿಗಿಳಿದಿದ್ದರು. ಸಂಜೆ ಹೊತ್ತಿಗೆ ಸಂಶಯಾಸ್ಪದವಾಗಿ ಬಂದ KA-20-Z-9585 ನಂಬರಿನ ಬೊಲೆರೋ ವಾಹನವನ್ನು ಅಡ್ಡಗಟ್ಟಿದಾಗ ಖದೀಮರ ಎದೆಯಲ್ಲಿ ನಡುಕ ಶುರುವಾಗಿತ್ತು.

ನೈಜೀರಿಯಾ ಕನೆಕ್ಷನ್ ಮತ್ತು ಅಣ್ಣ-ತಮ್ಮನ ಜುಗಲ್‌ಬಂದಿ!
ವಾಹನದಲ್ಲಿದ್ದ ಅಸಾಮಿಗಳನ್ನು ವಿಚಾರಿಸಿದಾಗ ಅವರಿಬ್ಬರು ಬೊಳಂತೂರು ನಿವಾಸಿಗಳಾದ ಮೊಹಮ್ಮದ್‌ ನಿಜಾಮುದ್ದೀನ್‌ (30) ಮತ್ತು ಆತನ ಸಹೋದರ ಮೊಹಮದ್‌ ಶಾಹೀಂ (19) ಎಂಬುದು ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆಯಲ್ಲಿ ಇವರು ಬೆಂಗಳೂರಿನಲ್ಲಿ ಒಬ್ಬ ಅಪರಿಚಿತ ನೈಜೀರಿಯನ್ ವ್ಯಕ್ತಿಯಿಂದ ಈ ಮಾದಕ ದ್ರವ್ಯ ಖರೀದಿಸಿ, ಇಲ್ಲಿ ಮಾರಾಟ ಮಾಡಲು ತರುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

ಆರೋಪಿಗಳಿಂದ ಸುಮಾರು 42,30,000 ರೂಪಾಯಿ ಮೌಲ್ಯದ 423 ಗ್ರಾಂ ಎಂಡಿಎಂಎ ಒಂದು ಬೊಲೆರೋ ಗಾಡಿ ಹಾಗೂ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 46,25,000 ರೂಪಾಯಿ ಆಗಿರಬಹುದೆಂದು ಅಂದಾಜಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕರಾವಳಿಯ ಯುವಜನತೆಯನ್ನು ಗುರಿಯಾಗಿಸಿ ನಡೆಯುತ್ತಿರುವ ಈ ಡ್ರಗ್ ಮಾಫಿಯಾಕ್ಕೆ ಬಂಟ್ವಾಳ ಪೊಲೀಸರು ಈಗ ಖಡಕ್ ವಾರ್ನಿಂಗ್ ನೀಡಿದ್ದಾರೆ.

error: Content is protected !!