ಗಂಗಾವತಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಿಜೆಪಿ ಯುವ ಮುಖಂಡ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಅವರ ಭೀಕರ ಕೊಲೆ ಪ್ರಕರಣದಲ್ಲಿ, ಗಂಗಾವತಿಯ ನ್ಯಾಯಾಲಯವು ಆರು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.

ಸ್ಕೇಚ್ ಹಾಕಿ ಬೇಟೆಯಾಡಿದ್ದ ಹಂತಕರು!
ಅದು ಅಕ್ಟೋಬರ್ 8ರ ಕರಾಳ ರಾತ್ರಿ. ನಗರದ ರಾಣಾ ಪ್ರತಾಪ್ ಸಿಂಗ್ ವೃತ್ತವು ರಕ್ತಸಿಕ್ತವಾಗುವುದಕ್ಕೆ ಕ್ಷಣಗಣನೆ ಆರಂಭವಾಗಿತ್ತು. ತಮ್ಮ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೆಂಕಟೇಶ್‌ರನ್ನು ಹಸಿದ ತೋಳಗಳಂತೆ ಕಾಯುತ್ತಿದ್ದ ರವಿ ಮತ್ತು ಗ್ಯಾಂಗ್, ಕಾರಿನಲ್ಲಿ ಬೆನ್ನಟ್ಟಿ ಬಂದು ಢಿಕ್ಕಿ ಹೊಡೆದಿತ್ತು. ಕೆಳಗೆ ಬಿದ್ದ ವೆಂಕಟೇಶ್‌ರನ್ನು ಸುತ್ತುವರಿದ ಹಂತಕರು, ಜನನಿಬಿಡ ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಅಕ್ಷರಶಃ ಕೊಚ್ಚಿ ಹಾಕಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವೆಂಕಿ ಸಾವನ್ನಪ್ಪಿದ್ದು, ಗಂಗಾವತಿಯಲ್ಲಿ ಗ್ಯಾಂಗ್ ವಾರ್ ಭೀತಿ ಸೃಷ್ಟಿಸಿತ್ತು.

ಈ ಕೊಲೆಯ ಹಿಂದೆ ರಕ್ತಸಿಕ್ತ ಹಳೆಯ ದ್ವೇಷದ ಕಥೆಯಿದೆ. ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ವೆಂಕಟೇಶ ಕುರುಬರ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಸಾಕ್ಷಿ ನುಡಿಯಬಾರದು ಎಂಬ ಬೆದರಿಕೆಗೂ ಬಗ್ಗದ ವೆಂಕಿ, ಅನ್ಯಾಯದ ವಿರುದ್ಧ ನಿಂತಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡಿದ್ದ ʻಕ್ರಿಮಿನಲ್’ ಗ್ಯಾಂಗ್, ವೆಂಕಿಯನ್ನು ಮುಗಿಸುವುದೇ ಏಕೈಕ ದಾರಿ ಎಂದು ನಿರ್ಧರಿಸಿ ಈ ಬರ್ಬರ ಕೃತ್ಯ ಎಸಗಿತ್ತು.

ಪ್ರಕರಣದ ತೀವ್ರತೆಯನ್ನು ಅರಿತ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು, ಸಿಸಿಟಿವಿ ಫೂಟೇಜ್ ಮತ್ತು 927 ಪುಟಗಳ ಚಾರ್ಜ್‌ಶೀಟ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದರು. ಎ1 ಆರೋಪಿ ರವಿ ಮೇಲೆ 17ಕ್ಕೂ ಹೆಚ್ಚು ಕೇಸ್‌ಗಳಿರುವುದು ಮತ್ತು ಅಪರಾಧಿಗಳ ಕ್ರೂರ ಇತಿಹಾಸವನ್ನು ಗಮನಿಸಿದ ನ್ಯಾಯಾಲಯ, “ಇಂತಹ ಕೃತ್ಯಗಳು ನಾಗರಿಕ ಸಮಾಜಕ್ಕೆ ಮಾರಕ” ಎಂದು ಅಭಿಪ್ರಾಯಪಟ್ಟಿತು. ಕೊನೆಗೆ ಆರು ಜನ ಅಪರಾಧಿಗಳಿಗೆ ಮರಣದಂಡನೆ ಹಾಗೂ ತಲಾ 3 ಲಕ್ಷ ರೂ. ದಂಡ ವಿಧಿಸಿ, ಪಾತಕ ಲೋಕಕ್ಕೆ ಬಿಸಿ ಮುಟ್ಟಿಸಿತು.

ಈ ಪ್ರಕರಣವು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಹಳೆಯ ವೈಮನಸ್ಸು ಮತ್ತು ಗೆಳೆತನದ ನಡುವೆ ಹುಟ್ಟಿದ ದ್ವೇಷವನ್ನು ಬೇಧಿಸಿದ ಗಂಗಾವತಿ ಪೊಲೀಸರು, ಆರೋಪಿಗಳು ತಪ್ಪಿಸಿಕೊಳ್ಳದಂತೆ ಬಲವಾದ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾದರು. “ಇದು ಪೊಲೀಸರ ದಕ್ಷತೆಗೆ ಸಂದ ಜಯ” ಎಂದು ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಅವರು ಹಂತಕರಿಗೆ ಶಿಕ್ಷೆಯಾದ ಬೆನ್ನಲ್ಲೇ ಹರ್ಷ ವ್ಯಕ್ತಪಡಿಸಿದ್ದಾರೆ.
