ಸುರತ್ಕಲ್: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಗಲ್ಫ್‌ನಿಂದ ಬಂದ ಎರಡೇ ದಿನಕ್ಕೆ ಯುವಕ ಸಾವು- ಮೂವರು ಗಾಯ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿಯ ತಡಂಬೈಲು ಸುಪ್ರೀಮ್ ಹಾಲ್ ಎದುರು ಭಾನುವಾರ ರಾತ್ರಿ ಸಂಭವಿಸಿದ ಎರಡು ದ್ವಿಚಕ್ರ ವಾಹನಗಳ ನಡುವಿನ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಚೊಕ್ಕಬೆಟ್ಟು 8ನೇ ಬ್ಲಾಕ್ ನಿವಾಸಿ ಮುಹಮ್ಮದ್ ಅಖ್ತರ್ ಹುಸೈನ್ (25) ಎಂದು ಗುರುತಿಸಲಾಗಿದೆ. ಅಖ್ತರ್ ಅವರು ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದು, ರಜೆ ನಿಮಿತ್ತ ಕಳೆದ ಶುಕ್ರವಾರವಷ್ಟೇ ಊರಿಗೆ ಮರಳಿದ್ದರು. ಬಂದ ಎರಡೇ ದಿನಗಳಲ್ಲಿ ವಿಧಿ ಆಟವಾಡಿದ್ದು, ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಅಪಘಾತ ಸಂಭವಿಸಿದ್ದು ಹೇಗೆ?
ಅಖ್ತರ್ ಹುಸೈನ್ ಮತ್ತು ಹಾಫಿಲ್ ಮುಕ್ಕದಿಂದ ಚೊಕ್ಕಬೆಟ್ಟುವಿನ ತಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಸುರತ್ಕಲ್ ಕಡೆಯಿಂದ ಬಂದ ರಾಘವೇಂದ್ರ ಮತ್ತು ಯಶವಂತ ಅವರಿದ್ದ ದ್ವಿಚಕ್ರ ವಾಹನವು, ತಡಂಬೈಲು ಬಳಿ ಏಕಾಏಕಿ ಮತ್ತು ಅಜಾಗರೂಕತೆಯಿಂದ ಮುಂಚೂರು ಕಡೆಗೆ ತಿರುಗಿದೆ. ಈ ಸಂದರ್ಭದಲ್ಲಿ ಎರಡು ವಾಹನಗಳ ನಡುವೆ ಸಂಘರ್ಷ ಸಂಭವಿಸಿ ಅಪಘಾತ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಅಖ್ತರ್ ಅವರೊಂದಿಗೆ ಇದ್ದ ಹಾಫಿಲ್ (22) ಮತ್ತು ಇನ್ನೊಂದು ವಾಹನದಲ್ಲಿದ್ದ ಮಧ್ಯ ಮುಂಚೂರು ನಿವಾಸಿಗಳಾದ ರಾಘವೇಂದ್ರ (24) ಹಾಗೂ ಯಶವಂತ (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಅಖ್ತರ್ ಹುಸೈನ್ ಅವರ ಪರಿಚಯಸ್ಥರಾದ ನೂರುಲ್ಲಾ ಹುಸೈನ್ ಸಾಡು ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!