ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು ಶೀಘ್ರದಲ್ಲಿ ಆರಂಭ; ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌

ಮಂಗಳೂರು: ಬಹುಬೇಡಿಕೆಯ ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಶನಿವಾರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಮಳೆಗಾಲದ ಮೊದಲೇ ಹಳಿಯೇರುವ ಸಾಧ್ಯತೆ ಇದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ವಂದೇ ಭಾರತ್‌ ರೈಲಿಗೆ ಮುಖ್ಯವಾಗಿ ಬೇಕಾದ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡು ಇದರ ಪರೀಕ್ಷೆ ಕೂಡ ನಡೆದಿದೆ. ಹಳಿಗಳ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಕೂಡ ನಡೆಯುತ್ತಿದೆ. ಹಾಗಾಗಿ ಪ್ರಾಯೋಗಿಕ ಸಂಚಾರ ಜೂನ್‌ ತಿಂಗಳಿಗಿಂತ ಮೊದಲೇ ಆರಂಭವಾಗುವ ನಿರೀಕ್ಷೆ ಇದೆ.

ವಂದೇ ಭಾರತ್‌ ಇತರ ರೈಲುಗಳಿಗಿಂತ ವೇಗವಾಗಿ ಸಂಚರಿಸುತ್ತದೆ. ಆದರೆ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವೆ 55 ಕಿ.ಮೀ. ಅತ್ಯಂತ ಕಡಿದಾದ ಘಟ್ಟ ಪ್ರದೇಶವಿದೆ. ಇಲ್ಲಿ ಸುರಕ್ಷತೆಯ ದೃಷ್ಟಿಯಿಂದ ರೈಲುಗಳು ಗಂಟೆಗೆ ಗರಿಷ್ಠ 30 ಕಿ.ಮೀ ವೇಗದಲ್ಲಿ ಚಲಿಸಲು ಮಾತ್ರ ಸಾಧ್ಯವಿದೆ. ಇದನ್ನು ಕನಿಷ್ಠ 40 ಕಿ.ಮೀ.ಗೆ ಹೆಚ್ಚಿಸುವ ಸಾಧ್ಯತೆ ಕೂಡ ಕಡಿಮೆ. ಆದರೆ ಉಳಿದ ಭಾಗದಲ್ಲಿ ವೇಗ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಕೆಲವೆಡೆ ಹಳಿಗಳ ಸಾಮರ್ಥಯ ಹೆಚ್ಚಿಸುವ ಕಾಮಗಾರಿ ನಡೆಯುತ್ತಿದೆ.

ನಿಲ್ದಾಣ ಅಂತಿಮಗೊಂಡಿಲ್ಲ ರೈಲ್ವೇ ಮಂಡಳಿಯು ದಕ್ಷಿಣ, ನೈಋತ್ಯ ಹಾಗೂ ಕೊಂಕಣ ರೈಲ್ವೇಗಳಿಗೆ ನೀಡಿದ ನಿರ್ದೇಶನದಂತೆ ಸಿದ್ದಗೊಂಡಿದ್ದ ಅನೌಪಚಾರಿಕ ವೇಳಾಪಟ್ಟಿಯ ಟಿಪ್ಪಣಿಯಲ್ಲಿ ಈ ರೈಲು ಬೆಂಗಳೂರು (ಯಶವಂತಪುರ) ಮತ್ತು ಮಡಗಾಂವ್‌ (ಗೋವಾ) ನಡುವೆ ಸಂಚರಿಸುತ್ತದೆ. ಆ ಪಟ್ಟಿ ಪ್ರಕಾರ ಮಂಗಳೂರು ಸೆಂಟ್ರಲ್‌ ಅಥವಾ ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಇರಲಿಲ್ಲ. ಆದರೆ ಈ ರೈಲಿನ ವೇಳಾಪಟ್ಟಿ ಮತ್ತು ನಿಲ್ದಾಣಗಳ ಬಗ್ಗೆ ಅಂತಿಮಗೊಂಡಿಲ್ಲ. ಮಂಗಳೂರಿನಲ್ಲಿ ನಿಲುಗಡೆ ನಿರೀಕ್ಷಿಸಲಾಗಿದೆ. ದ.ಕ., ಉಡುಪಿ ಸಂಸದರು ಕೂಡ ಈ ಬಗ್ಗೆ ಭರವಸೆ ನೀಡಿದ್ದಾರೆ.

error: Content is protected !!