ಬೆಂಗಳೂರು: ಕಾಂತಾರ ಚಿತ್ರದ ಪವಿತ್ರ ದೈವದ ಕೂಗನ್ನು ಅಣಕಿಸಿ, ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ಶನಿವಾರ ಒಂದು ರೀತಿಯಲ್ಲಿ ‘ರಿಲೀಫ್’ ನೀಡಿದ್ದರೂ, ಮತ್ತೊಂದು ಕಡೆಯಲ್ಲಿ ‘ನಾಲಿಗೆ ಮೇಲೆ ಹಿಡಿತವಿರಲಿ’ ಎಂದು ಖಡಕ್ ಎಚ್ಚರಿಕೆ ನೀಡಿದೆ. ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವವನ್ನು ‘ಹೆಣ್ಣು ಭೂತ’ (Female Ghost) ಎಂದು ಹಾಸ್ಯ ಮಾಡಿದ್ದ ರಣವೀರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ನ್ಯಾಯಾಲಯವು ಈಗ ರದ್ದುಗೊಳಿಸಿದೆ.

ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ರಣವೀರ್ ಸಿಂಗ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿತು. “ನೀವು ಯಾರೇ ಆಗಿರಲಿ, ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿ ಬೇಕು. ಪವಿತ್ರ ದೈವದ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಮಾತನಾಡಿ ಜನರ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ನಿಮಗಿಲ್ಲ” ಎಂದು ಕೋರ್ಟ್ ನೇರವಾಗಿಯೇ ಎಚ್ಚರಿಸಿದೆ. ಸೂಪರ್‌ಸ್ಟಾರ್ ಪಟ್ಟಕ್ಕಿಂತ ಸಂಸ್ಕೃತಿಯೇ ದೊಡ್ಡದು ಎಂಬ ಸಂದೇಶವನ್ನು ಹೈಕೋರ್ಟ್ ಈ ಮೂಲಕ ಸ್ಪಷ್ಟಪಡಿಸಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಬಾಲಿವುಡ್‌ನ ಈ ‘ಧುರಂಧರ್’ ನಟ ತಾನು ಮಾಡಿದ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಕೇವಲ ಪತ್ರದ ಮೂಲಕ ಕ್ಷಮೆ ಕೇಳಿದ್ದಲ್ಲದೆ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪ್ರಾಯಶ್ಚಿತ್ತ ಮಾಡಿಕೊಳ್ಳುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ನ್ಯಾಯಾಲಯವು ಈ ಭರವಸೆಯನ್ನು ಪುರಸ್ಕರಿಸಿದ್ದು, ಮುಂದಿನ ನಾಲ್ಕು ವಾರಗಳೊಳಗೆ ಮೈಸೂರಿಗೆ ಭೇಟಿ ನೀಡಬೇಕು ಎಂದು ಆದೇಶಿಸಿದೆ. ಭದ್ರತೆಯ ದೃಷ್ಟಿಯಿಂದ ಭೇಟಿಯ ದಿನಾಂಕವನ್ನು ರಹಸ್ಯವಾಗಿಡಲಾಗಿದೆ.

“ದೈವಾರಾಧನೆಯು ಈ ನೆಲದ ಜನರ ಅಚಲ ನಂಬಿಕೆಯಾಗಿದೆ, ಅದನ್ನು ಹಾಸ್ಯದ ವಸ್ತುವಾಗಿಸಬೇಡಿ” ಎಂದು ನ್ಯಾಯಾಲಯ ಹೇಳಿರುವುದು ಕರಾವಳಿಯ ಜನರಲ್ಲಿ ಹರ್ಷ ತಂದಿದೆ. ರಣವೀರ್ ಸಿಂಗ್ ಪರ ವಕೀಲರು ಅವರ ಸಿನಿಮಾದ ಬಿಡುಗಡೆ ಮತ್ತು ಭದ್ರತೆಯ ಭೀತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಾಗ, ನ್ಯಾಯಾಲಯವು ದೇವಸ್ಥಾನ ಭೇಟಿಗೆ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ಸೂಚಿಸಿದೆ. ಒಟ್ಟಿನಲ್ಲಿ, ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಮಾತನಾಡುವಾಗ ಚಿತ್ರರಂಗದ ತಾರೆಯರು ಇನ್ನು ಮುಂದೆ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.