ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಪಡನ್ನ ಪಂಚಾಯತ್‌ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹ ನಡೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಏಪ್ರಿಲ್ 13ರಂದು ಎಡಚಾಕೈ ಅಳಿಕಲ್ ಜುಮಾ ಮಸೀದಿಯಲ್ಲಿ ಈ ವಿವಾಹ ನಡೆದಿದ್ದು, ಈಗ ಜಿಲ್ಲಾ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ನ್ಯಾಯಾಲಯಕ್ಕೆ ಈ ಬಗ್ಗೆ ಸಮಗ್ರ ವರದಿ ಸಲ್ಲಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಉದ್ಯೋಗದಲ್ಲಿರುವ 28 ವರ್ಷದ ಸಾಬಿರ್ ಎಂಬ ಯುವಕನೊಂದಿಗೆ ಬಾಲಕಿಯ ನಿಕಾಹ್ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಮಸೀದಿ ಸಮಿತಿ ನಿರಾಕರಿಸಿದರೂ ನಡೆದ ನಿಕಾಹ್!
ಬಾಲಕಿಯ ಮನೆಯವರು ಮೊದಲು ತಮ್ಮ ಸ್ಥಳೀಯ ಮಸೀದಿ ಸಮಿತಿಯನ್ನು ನಿಕಾಹ್‌ಗಾಗಿ ಸಂಪರ್ಕಿಸಿದ್ದರು. ಆದರೆ ಬಾಲಕಿಯ ವಯಸ್ಸನ್ನು ಗಮನಿಸಿದ ಸಮಿತಿಯು ಎರಡು ಬಾರಿ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಆದರೂ ವರನ ಕಡೆಯ ಮಸೀದಿಯಾದ ಅಳಿಕಲ್ ಜುಮಾ ಮಸೀದಿಯ ಕಾರ್ಯದರ್ಶಿ ಪಿ.ಕೆ. ತಾಜುದ್ದೀನ್ ಅವರು ಈ ಸಮಾರಂಭಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಮೀರ್ ಪಿ.ಕೆ. ದೂರಿದ್ದಾರೆ. ಅಚ್ಚರಿಯೆಂದರೆ, ತಾಜುದ್ದೀನ್ ಅವರು ಪಡನ್ನ ಪಂಚಾಯತ್ ಸದಸ್ಯರಾಗಿದ್ದು, ಬಾಲ್ಯ ವಿವಾಹ ತಡೆಗಟ್ಟುವ ವಾರ್ಡ್ ಮಟ್ಟದ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ!
ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆಯೇ ವರ ಸಾಬಿರ್ ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಧಿಕಾರಿಗಳು ಮಸೀದಿಯ ಸಿಸಿಟಿವಿ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿದ್ದಾರಾದರೂ, ಅದರಲ್ಲಿ ಯಾವುದೇ ದೃಶ್ಯಾವಳಿಗಳು ಪತ್ತೆಯಾಗಿಲ್ಲ. ವಿವಾಹದ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಆದರೆ, ನಿಕಾಹ್ ನೆರವೇರಿಸಿದ ಮೌಲ್ವಿಯವರು “ನನ್ನ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಿಸಲಾಗಿದೆ” ಎಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ʻಇದು ಮದುವೆಯಲ್ಲ, ಕೇವಲ ನಿಶ್ಚಿತಾರ್ಥʼ
ಆರೋಪ ಎದುರಿಸುತ್ತಿರುವ ಪಂಚಾಯತ್ ಸದಸ್ಯ ತಾಜುದ್ದೀನ್ ಅವರು ಇದನ್ನು ತಳ್ಳಿಹಾಕಿದ್ದು, “ಇದು ಕೇವಲ ನಿಶ್ಚಿತಾರ್ಥ ಮಾತ್ರ. ಬಾಲಕಿಗೆ 18 ವರ್ಷ ತುಂಬಿದ ನಂತರವೇ ವಿವಾಹ ಮಾಡಲಾಗುವುದು. ರಾಜಕೀಯ ದ್ವೇಷಕ್ಕಾಗಿ ಈ ಆರೋಪ ಮಾಡಲಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಬಾಲಕಿಯು ತನಗೆ ಮದುವೆಯಾಗಿರುವುದನ್ನು ಅಧಿಕಾರಿಗಳ ಮುಂದೆ ದೃಢಪಡಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ, ಇಂತಹ ವಿವಾಹಗಳು ಕಾನೂನುಬಾಹಿರ. ಇದರಲ್ಲಿ ಭಾಗಿಯಾದ ಪೋಷಕರು, ಧಾರ್ಮಿಕ ಮುಖಂಡರು ಅಥವಾ ಪ್ರೇರೇಪಿಸಿದವರಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಚಂದೇರಾ ಪೊಲೀಸರು ಸದ್ಯ ಚೈಲ್ಡ್ ಲೈನ್ ವರದಿಯ ನಿರೀಕ್ಷೆಯಲ್ಲಿದ್ದು, ಶೀಘ್ರದಲ್ಲೇ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.
