ಕಿನ್ನಿಗೋಳಿಯಲ್ಲಿ ಪಾದಚಾರಿಗಳ ಹಾದಿಗೆ ಬ್ಯಾನರ್ ಅಡ್ಡ! ಜನರು ನಡೆಯಬೇಕೋ?… ಹಾರಬೇಕೋ?

ಕಿನ್ನಿಗೋಳಿ: ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಜಾಂಗಣದ ಬಳಿ ಸಾರ್ವಜನಿಕರ ಸಂಚಾರಕ್ಕೆ ಮೀಸಲಿರುವ ಪುಟ್‌ಪಾತ್ ಅನ್ನು ಬ್ಯಾನರ್‌ಗಳು ಆಕ್ರಮಿಸಿಕೊಂಡಿದ್ದು, ಪಾದಚಾರಿಗಳು ಪ್ರಾಣಭೀತಿಯಲ್ಲಿ ರಸ್ತೆಯಲ್ಲೇ ನಡೆದಾಡುವಂತಾಗಿದೆ. ವಿದ್ಯುತ್ ಕಂಬಕ್ಕೆ ಆಧಾರವಾಗಿ ಬ್ಯಾನರ್‌ಗಳನ್ನು ಅಳವಡಿಸಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ರಾಜಾಂಗಣದ ಬಳಿಯಿರುವ ಪುಟ್‌ಪಾತ್ ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದಾಡಲು ಇರುವ ಏಕೈಕ ದಾರಿ. ಆದರೆ, ಇಲ್ಲಿನ ವಿದ್ಯುತ್ ಕಂಬಗಳನ್ನೇ ಆಧಾರವಾಗಿಟ್ಟುಕೊಂಡು ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಪುಟ್‌ಪಾತ್ ಸಂಪೂರ್ಣವಾಗಿ ಬಂದ್ ಆಗಿದ್ದು, ಮಕ್ಕಳು, ವೃದ್ಧರು ಅನಿವಾರ್ಯವಾಗಿ ವಾಹನಗಳು ಸಂಚರಿಸುವ ಮುಖ್ಯ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಡೆಯುವಂತಾಗಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಪಟ್ಟಣದ ಪ್ರಮುಖ ಭಾಗದಲ್ಲಿ ಇಷ್ಟೊಂದು ಅವ್ಯವಸ್ಥೆ ಇದ್ದರೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಂಬಗಳಿಗೆ ಬ್ಯಾನರ್ ಕಟ್ಟುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಆಯೋಜಕರು ಇದನ್ನು ಮುಂದುವರಿಸುತ್ತಿದ್ದಾರೆ. ಮಳೆ ಅಥವಾ ಗಾಳಿ ಬಂದಾಗ ಈ ಬ್ಯಾನರ್‌ಗಳು ವಿದ್ಯುತ್ ತಂತಿಗೆ ತಗುಲಿ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ.

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಈ ಬ್ಯಾನರ್‌ಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ದೊಡ್ಡ ದುರಂತ ಸಂಭವಿಸುವ ಮೊದಲು ಈ ಸಮಸ್ಯೆಯನ್ನು ಬಗೆಹರಿಸುತ್ತಾರೆಯೇ ಕಾದು ನೋಡಬೇಕಿದೆ.

error: Content is protected !!