
ಬೆಂಗಳೂರು: ಅಧಿಕ ಲಾಭಾಂಶ ನೀಡುವುದಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ಇದೀಗ ವಾಪಸ್ ಕೊಡಲು ಸಾಧ್ಯವಾಗದೆ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಅಪಾರ್ಟ್‌ಮೆಂಟ್ ವೊಂದರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂಪಿಗೆಹಳ್ಳಿ ನಿವಾಸಿ ವಿವೇಕ್ ದಯಾನಂದ್(45) ಮೃತ ವ್ಯಕ್ತಿ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಏ.22ರಂದು ಸಂಪಿಗೆಹಳ್ಳಿಯ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ದುರ್ಘಟನೆ ನಡೆದಿದ್ದು, ಈ ಸಂಬಂಧ ಆತನ ಪತ್ನಿ ಸಿಸಿಬಿ ವಿಚಾರಣೆ ಹಾಗೂ ಹೂಡಿಕೆದಾರರ ಒತ್ತಡದಿಂದಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಿವೇಕ್ ಅವರು ಇನ್‌ವಿಷನ್ ಬೆಂಗಳೂರು ಎಂಬ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಪರಿಚಯಸ್ಥ ಸಾರ್ವಜನಿಕರಿಗೆ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ, ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹೂಡಿಕೆ ಮಾಡಿಸಿದ್ದು, ತಿಂಗಳಿಗೆ ಶೇ.5-6ರಷ್ಟು ಲಾಭಾಂಶ ನೀಡುತ್ತೇನೆ ಎಂದು ನಂಬಿಸಿದ್ದ. ಆದರೆ, ಸರಿಯಾದ ಸಮಯಕ್ಕೆ ಹಣ ವಾಪಸ್ ಕೊಟ್ಟಿಲ್ಲ ಎಂದು ಹೇಳಲಾಗಿದೆ.

ಹೀಗಾಗಿ ಇತ್ತೀಚೆಗೆ ಹಣ ವಾಪಸ್ ನೀಡುವಂತೆ ಹೂಡಿಕೆದಾರರು ಒತ್ತಡ ಹೇರುತ್ತಿದ್ದರು. ಜತೆಗೆ ಈತನ ವಿರುದ್ಧ ಪೊಲೀಸ್ ಠಾಣೆಯಲ್ಲೂ ಹಲವರು ದೂರು ನೀಡಿದ್ದರು. ಆದರೆ, ತನ್ನ ಖಾತೆಯಲ್ಲಿ ಕೋಟ್ಯಂತರ ರೂ. ಇದ್ದು, ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದ.

ಅಲ್ಲದೆ, ಹಣ ಹಿಂದಿರುಗಿಸಲು ಕೋಟ್ಯಂತರ ರೂ. ಸಾಲ ಕೂಡ ಮಾಡಿಕೊಂಡಿದ. ಮತ್ತೂಂದೆಡೆ ಕೋಟ್ಯಂತರ ರೂ. ವಂಚನೆ ಆರೋಪ ಸಂಬಂಧ ಸಿಸಿಬಿ ತನಿಖೆ ಆರಂಭಿಸಿತ್ತು. ಅದರಂತೆ ಸಿಸಿಬಿ ಅಧಿಕಾರಿಗಳು ವಿವೇಕ್ ದಯಾನಂದ್‌ನನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ವಿವೇಕ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.