ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (NICO) ವತಿಯಿಂದ ಏಪ್ರಿಲ್ 28 ಮತ್ತು 29 ರಂದು ಎರಡು ದಿನಗಳ ಅಂತರರಾಷ್ಟ್ರೀಯ ಮಾಧ್ಯಮ ಸಮಾವೇಶ 2026 ಅನ್ನು ಆಯೋಜಿಸಲಾಗಿದೆ. ಮಂಗಳೂರಿನ ಪನೀರ್ ಕ್ಯಾಂಪಸ್‌ನಲ್ಲಿರುವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಡಾ. ಮೌಲ್ಯಾ ಬಾಲಾಡಿ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ಏಪ್ರಿಲ್ 29ರಂದು ನಡೆಯಲಿರುವ ಮಾಧ್ಯಮ ಕಾರ್ಯಾಗಾರವು ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರಿಗಾಗಿ ಆಯೋಜಿತವಾಗಿದೆ ಎಂದು ತಿಳಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಈ ತರಬೇತಿಯಲ್ಲಿ ಇಂದಿನ ಡಿಜಿಟಲ್ ಯುಗದ ಪ್ರಬಲ ಸವಾಲುಗಳಾದ ʻಡೀಪ್ ಫೇಕ್’ (Deepfake) ತಂತ್ರಜ್ಞಾನದ ದುರುಪಯೋಗ, ಸುಳ್ಳು ಸುದ್ದಿ (Fake News) ಮತ್ತು ತಪ್ಪು ಮಾಹಿತಿಗಳನ್ನು ಗುರುತಿಸುವ ಕುರಿತು ಸವಿಸ್ತಾರವಾಗಿ ಬೆಳಕು ಚೆಲ್ಲಲಾಗುವುದು. ಅಲ್ಲದೆ, ಸಂಘರ್ಷದ ಸಂದರ್ಭಗಳಲ್ಲಿ ವರದಿಗಾರಿಕೆ ಮಾಡುವಾಗ ಪತ್ರಕರ್ತರು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ ವೃತ್ತಿಪರತೆಯ ಬಗ್ಗೆಯೂ ಈ ವೇದಿಕೆಯಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ʻಡೇಟಾ ಲೀಡ್ಸ್’ ಅಕಾಡೆಮಿಯ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಾಗಾರವನ್ನು ಸ್ವತಂತ್ರ ಪತ್ರಕರ್ತ ಎಸ್. ಕುಮಾರ್ ಅವರು ನಡೆಸಿಕೊಡಲಿದ್ದಾರೆ ಎಂದು ಡಾ. ಮೌಲ್ಯಾ ಬಾಲಾಡಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ʻಜಾಗತಿಕ ಸಂಘರ್ಷಗಳಲ್ಲಿ ಮಾಧ್ಯಮದ ಜವಾಬ್ದಾರಿಯ ಮರುಚಿಂತನೆʼ ಎಂಬ ವಿಷಯದ ಅಡಿಯಲ್ಲಿ ಈ ಸಮಾವೇಶ ನಡೆಯಲಿದೆ. ಇಂದಿನ ಬದಲಾಗುತ್ತಿರುವ ಜಾಗತಿಕ ಅಸ್ಥಿರತೆಯ ಯುಗದಲ್ಲಿ ಪತ್ರಿಕೋದ್ಯಮದ ಪಾತ್ರದ ಬಗ್ಗೆ ಚರ್ಚಿಸಲು ಉದ್ಯಮದ ಪ್ರಮುಖರು ಮತ್ತು ಶಿಕ್ಷಣ ತಜ್ಞರು ಈ ವೇದಿಕೆಯಲ್ಲಿ ಒಂದಾಗಲಿದ್ದಾರೆ. ʻದಿ ನ್ಯೂಸ್ ಮಿನಿಟ್’ ಡಿಜಿಟಲ್ ಮಾಧ್ಯಮದ ಸಹ-ಸ್ಥಾಪಕಿ ಧನ್ಯಾ ರಾಜೇಂದ್ರನ್ ಸಮಾವೇಶವನ್ನು ಉದ್ಘಾಟಿಸಲಿದ್ದು, ಡಾ. ನಿವಿಲ್ ಮೊರೋ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ʻಮಾಧ್ಯಮ ಶ್ರೇಷ್ಠತಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ. ಸುಮಾ ಬಲ್ಲಾಳ್ ಮತ್ತು ಮಾಜಿ ರಾಯಿಟರ್ಸ್ ವರದಿಗಾರ ಸ್ಟ್ಯಾನಿ ಕರ್ವಾಲೋ ಅವರು ಭಾಗವಹಿಸಲಿದ್ದಾರೆ ಎಂದು ಡಾ. ಮೌಲ್ಯಾ ಮಾಹಿತಿ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹ ಪ್ರಾಧ್ಯಾಪಕರಾದ ಡಾ. ಅನೀಶಾ, ಪ್ರಾಧ್ಯಾಪಕರಾದ ನೇಸರ ಕಾಡನಕುಪ್ಪೆ, ಜಯಂತ್ ಕೋಡ್ಕಾನಿ ಉಪಸ್ಥಿತರಿದ್ದರು.