ಮೋದಿ ನಾಳೆ ಉದ್ಘಾಟಿಸಬೇಕಿದ್ದ ₹79,000 ಕೋಟಿಯ ತೈಲ ಘಟಕದಲ್ಲಿ ಅಗ್ನಿ ಅವಘಡ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 21) ಉದ್ಘಾಟಿಸಬೇಕಿದ್ದ ರಾಜಸ್ಥಾನದ ಬಲೋತ್ರಾದಲ್ಲಿರುವ ಅತ್ಯಾಧುನಿಕ ತೈಲ ಶುದ್ಧೀಕರಣ ಘಟಕದಲ್ಲಿ ಭಾನುವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ನಾಳೆಯ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ರಾಜಸ್ಥಾನದ ಬಲೋತ್ರಾದ ಪಚಪದ್ರಾದಲ್ಲಿರುವ ಈ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸುಮಾರು 20ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಅದೃಷ್ಟವಶಾತ್ ಈವರೆಗೆ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.

ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (HPCL) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಉದ್ಯಮವಾಗಿರುವ ಈ ಘಟಕವನ್ನು ಸುಮಾರು 79,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ಮೊದಲ ಗ್ರೀನ್ ಫೀಲ್ಡ್ ರಿಫೈನರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ನೇರವಾಗಿ ಮುದ್ರಾ ಬಂದರಿಗೆ ಸಂಪರ್ಕ ಹೊಂದಿರುವ ಈ ಘಟಕದಿಂದ ಸಾಗಣೆ ವೆಚ್ಚ ಕಡಿಮೆಯಾಗುವುದಲ್ಲದೆ, ರಾಜ್ಯ ಸರ್ಕಾರಕ್ಕೆ ವಾರ್ಷಿಕ 5,000 ಕೋಟಿ ರೂ. ಆದಾಯದ ನಿರೀಕ್ಷೆಯೂ ಇತ್ತು.

ನಾಳೆ ನಡೆಯಬೇಕಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಬೇಕಿತ್ತು. ಆದರೆ ಘಟಕಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ರಿಪೇರಿ ಕಾಮಗಾರಿಗಳು ಪೂರ್ಣಗೊಂಡ ಬಳಿಕವಷ್ಟೇ ಹೊಸ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ಬೆಂಕಿ ಅವಘಡದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೈಲ ಮಾರುಕಟ್ಟೆ ಮತ್ತು ಪೂರೈಕೆಯ ದೃಷ್ಟಿಯಿಂದ ಈ ಘಟಕದ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು.

error: Content is protected !!