ಇಸ್ಲಾಮಾಬಾದ್ ಶಾಂತಿ ಮಾತುಕತೆಯಿಂದ ಇರಾನ್ ಹಿಂದಕ್ಕೆ: ಅಮೆರಿಕಾ ವಿರುದ್ಧ ಟೆಹ್ರಾನ್ ಕೆಂಡಾಮಂಡಲ

ಇಸ್ಲಾಮಾಬಾದ್: ಅಮೆರಿಕಾ ಮತ್ತು ಇರಾನ್ ನಡುವಿನ ಸಂಬಂಧ ಸುಧಾರಣೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಆರಂಭಕ್ಕೂ ಮುನ್ನವೇ ಹಳಿತಪ್ಪಿವೆ. ಏಪ್ರಿಲ್ 21ರ ಮಂಗಳವಾರ ನಡೆಯಬೇಕಿದ್ದ ಈ ಮಹತ್ವದ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇರಾನ್ ಸರ್ಕಾರವು ನೇರವಾಗಿ ನಿರಾಕರಿಸುವ ಮೂಲಕ ವಾಷಿಂಗ್ಟನ್‌ಗೆ ಶಾಕ್ ನೀಡಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ, ಅಮೆರಿಕಾದ ಮೇಲೆ ನಮಗೆ ಇನ್ನು ನಂಬಿಕೆಯಿಲ್ಲ ಎಂದು ಬಹಿರಂಗವಾಗಿ ಘೋಷಿಸಿದರು. ಅಮೆರಿಕಾದ ಅತಿಯಾದ ಬೇಡಿಕೆಗಳು, ಅವಾಸ್ತವಿಕ ನಿರೀಕ್ಷೆಗಳು ಮತ್ತು ಅವರ ನಿಲುವುಗಳಲ್ಲಿನ ಪದೇ ಪದೇ ಸ್ಥಿತ್ಯಂತರಗಳು ಮಾತುಕತೆಯ ವಿಫಲತೆಗೆ ಕಾರಣ ಎಂದು ಅವರು ದೂರಿದರು. ಅಲ್ಲದೆ, ಸ್ಟ್ರೈಟ್ ಆಫ್ ಹಾರ್ಮುಜ್‌ನಲ್ಲಿ ಅಮೆರಿಕಾ ನೌಕಾ ದಿಗ್ಬಂಧನ ಮುಂದುವರಿಸಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ನಾವು ಯುದ್ಧವನ್ನು ಆರಂಭಿಸಿದವರಲ್ಲ, ಆದರೆ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ಆತ್ಮರಕ್ಷಣೆ ಮಾಡಿಕೊಳ್ಳುವುದನ್ನು ನಿಲ್ಲಿಸುವುದಿಲ್ಲ” ಎಂದು ಬಘೈ ಎಚ್ಚರಿಸಿದ್ದಾರೆ. ಅಮೆರಿಕಾ ಅಥವಾ ಇಸ್ರೇಲ್ ಈ ಭಾಗದಲ್ಲಿ ಯಾವುದೇ ಹೊಸ ಸಾಹಸಕ್ಕೆ ಕೈಹಾಕಿದರೆ ಅದನ್ನು ಎದುರಿಸಲು ಇರಾನ್ ಸಶಸ್ತ್ರ ಪಡೆಗಳು ಸರ್ವಸನ್ನದ್ಧವಾಗಿವೆ ಎಂದು ಅವರು ಗುಡುಗಿದ್ದಾರೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದ ಉಂಟಾಗುತ್ತಿರುವ ತೈಲ ಬೆಲೆ ಏರಿಕೆಗೆ ಅಮೆರಿಕಾದ ಪ್ರಚೋದನಾಕಾರಿ ನಡೆಗಳೇ ಮೂಲ ಕಾರಣ ಎಂದು ಅವರು ಯುರೋಪಿಯನ್ ಒಕ್ಕೂಟಕ್ಕೆ ನೆನಪಿಸಿದರು.

ಮತ್ತೊಂದೆಡೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಗಾಗಿ ತಮ್ಮ ಹಿರಿಯ ತಂಡವನ್ನು ಇಸ್ಲಾಮಾಬಾದ್‌ಗೆ ಕಳುಹಿಸಲು ಸಜ್ಜಾಗಿದ್ದಾರೆ. ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ಮಧ್ಯಪ್ರಾಚ್ಯದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಈಗಾಗಲೇ ಪಾಕಿಸ್ತಾನದತ್ತ ಪ್ರಯಾಣ ಬೆಳೆಸಿದ್ದಾರೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ವದಂತಿಗಳಿದ್ದರೂ, ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಮೆರಿಕಾದ ಗಡುವು ಅಥವಾ ಅಂತಿಮ ಎಚ್ಚರಿಕೆಗಳಿಗೆ ನಾವು ತಲೆಬಾಗುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ಮತ್ತು ಇಂಧನ ಭದ್ರತೆಯ ಮೇಲೆ ಆತಂಕದ ಕರಿನೆರಳು ಆವರಿಸಿದೆ. ಇರಾನ್ ಮಾತುಕತೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಅಮೆರಿಕಾ ಯಾವ ರೀತಿಯ ಪ್ರತಿತಂತ್ರ ಹೂಡಲಿದೆ ಎಂಬುದು ಈಗ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

error: Content is protected !!